ಪುರಸಭೆ ಪುಟ್‍ಬಾತ್ ತೆರವು ಕಾರ್ಯಾಚರಣೆ

ಕೆ.ಆರ್.ಪೇಟೆ. ಮೇ.13:- ಪಟ್ಟಣದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇದ್ದ ಪುಟ್‍ಬಾತ್ ಸ್ಥಳವನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದರಿಂದ ಸಾರ್ವಜನಿಕರಿಗೆ ಹಾಗೂ ಪಾದಾಚಾರಿಗಳಿಗೆ ತೊಂದರೆಯಾಗುತ್ತಿದ್ದುದನ್ನು ಗಮನಿಸಿದ ಪುರಸಭೆ ಪುಟ್‍ಬಾತ್ ತೆರವು ಕಾರ್ಯಾಚರಣೆ ನಡೆಸಿತು.
ಪಟ್ಟಣದ ಎಂ.ಕೆ.ಬೊಮ್ಮೇಗೌಡ ಸರ್ಕಲ್‍ನಿಂದ ಪ್ರಾರಂಭವಾದ ಪುಟ್‍ಬಾತ್ ತೆರವು ಕಾರ್ಯಾಚರಣೆ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿಯೂ ಅನಧೀಕೃತವಾಗಿ ನಿರ್ಮಿಸಿಕೊಂಡಿದ್ದ ಸ್ಥಳಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿ ಸಾರ್ವಜನಿಕರಿಗೆ ಹಾಗೂ ಪಾದಾಚಾರಿಗಳಿಗೆ ಸೂಕ್ತ ಅನುಕೂಲ ಕಲ್ಪಿಸಲಾಯಿತು.
ಈ ಕುರಿತಂತೆ ಮಾತನಾಡಿದ ಪುರಸಭಾ ಮುಖ್ಯಾಧಿಕಾರಿ ಕುಮಾರ್ ಬಹಳ ದಿನಗಳಿಂದಲೂ ಸಾರ್ವಜನಿಕರು ಪುಟ್‍ಬಾತ್ ಒತ್ತುವರಿ ಬಗ್ಗೆ ದೂರು ನೀಡಿದ್ದರು ಇದನ್ನು ಗಮನಿಸಿದ ಪುರಸಭೆ ಸಾರ್ವಜನಿಕರ ಅನುಕೂಲಕ್ಕೆ ಹಾಗೂ ಸುಗಮ ಸಂಚಾರಕ್ಕೆ ಅನುವುಮಾಡಿಕೊಡುವ ದೃಷ್ಟಿಯಿಂದ ಈ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಯಾರಿಗಾದರೂ ತೊಂದರೆ ಕೊಡಬೇಕೆಂಬ ಉದ್ದೇಶದಿಂದ ಈ ಕೆಲಸ ಮಾಡುತ್ತಿಲ್ಲ. ಸಣ್ಣಸಣ್ಣ ಕೈಗಾಡಿಗಳಲ್ಲಿ ಪಾನಿಪುರಿ, ಗೋಬಿಮಂಚೂರಿ, ಮೀನು, ಎಗ್‍ರೈಸ್, ಆಮ್ಲೇಟ್ ಮುಂತಾದುವುಗಳನ್ನು ತಿಂದು ಬಿಸಾಕುತ್ತಿದ್ದ ತ್ಯಾಜ್ಯ ಒಳಚರಂಡಿಗಳಿಗೆ ಸೇರಿ ಒಳಚರಂಡಿ ಬ್ಲಾಕ್ ಆಗುತ್ತಿತ್ತು. ಇದರಿಂದಾಗಿ ಮಳೆಗಾಲದಲ್ಲಿ ಸುಗಮವಾಗಿ ನೀರು ಚಲಿಸದೇ ನೀರು ಅಂಗಡಿಗಳಿಗೆ ನುಗ್ಗುವುದು ಸೇರಿದಂತೆ ಸಾಕಷ್ಟು ತೊಂದರೆಯಾಗುತ್ತಿತ್ತು. ಅಲ್ಲದೇ ಇಂಥಹ ಅಂಗಡಿಗಳ ಮುಂದೆ ಸ್ಕೂಟರ್, ಕಾರುಗಳನ್ನು ನಿಲುಗಡೆ ಮಾಡುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಹಳೆಯ ಸ್ಟೇಟ್‍ಬ್ಯಾಂಕ್ ಪಕ್ಕದಲ್ಲಿರುವÀ ರಸ್ತೆಯ ತಿರುವಿನಲ್ಲಿ ಸಾಕಷ್ಟು ಅನಾಹುತಗಳಾಗಿದ್ದವು. ಇವೆಲ್ಲಾ ಸಮಸ್ಯೆಗಳನ್ನು ಮನಗಂಡು ಪುಟ್‍ಬಾತ್ ತೆರವು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಪುಟ್‍ಬಾತ್ ತೆರವು ಕಾರ್ಯಾಚರಣೆಯಲ್ಲಿ ಪಟ್ಟಣ ಠಾಣೆಯ ಪೊಲೀಸ್ ನಿರೀಕ್ಷಕ ಎಂ.ಕೆ.ದೀಪಕ್, ಗ್ರಾಮಾಂತರ ಠಾಣೆಯ ಪಿಎಸ್‍ಐಗಳಾದ ಪ್ರಮೋದ್, ಬಸವರಾಜಚಿಂಚೋಳಿ, ಶಿವಲಿಂಗಪ್ಪ, ಪುರಸಭಾ ಕಛೇರಿಯ ಮೇನೇಜರ್ ಸೋಮಶೇಖರ್, ಮಂಟೆಮಂಜು, ಸೇರಿದಂತೆ ಹಲವರು ಹಾಜರಿದ್ದರು.