ಪುರಸಭೆ ಕಛೇರಿಗೆ ಮಹಿಳೆಯರಿಂದ ಬೀಗ ಹಾಕಿ ಪ್ರತಿಭಟನೆ

ಲಿಂಗಸುಗೂರು,ಜ.೧೦- ಪುರಸಭೆ ವ್ಯಾಪ್ತಿಯಲ್ಲಿ ಬರುವ ನಗರದ ೧೫ನೇ ವಾರ್ಡ್‌ನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸಾರ್ವಜನಿಕರಿಗೆ ಸರಿಯಾಗಿ ಶುದ್ದ ಕುಡಿಯುವ ನೀರು ಪೂರೈಕೆಗೆ ಮಾಡದೆ ಜನರ ಜೊತೆ ಚಲ್ಲಾವಾಡುತ್ತಿದ್ದಾರೆ ಎಂದು ಮೈಬೂಬಪಾಶ ಇವರು ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವಾರ್ಡ್‌ನ ಜನರಿಗೆ ಕುಡಿಯಲು ನೀರು ಕೊಡದೆ ರಾಜಕೀಯ ಮಾಡುವ ಪುರಸಭೆ ಸದಸ್ಯ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ್ ಕುಲಕರ್ಣಿ ಇವರು ಜನರ ಪ್ರಾಣ ಹಿಂಡಿ ಹಿಪ್ಪೆ ಮಾಡುತ್ತಾ, ಆಡಳಿತ ನಡೆಸುವ ಮುಖಾಂತರ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಪ್ರತಿಭಟನಾಕಾರರು ಇವರ ವಿರುದ್ಧ ಹರಿಹಾಯ್ದಿದ್ದಾರೆ.
ಪುರಸಭೆ ಅಧ್ಯಕ್ಷೆ ಸುನೀತಾ ಕೆಂಭಾವಿ ಇವರು ಆಡಳಿತದಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತಗದೆ ಇರುವುದು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ ಎಂದು ಮಹಿಳೆಯರು ಅಧ್ಯೆಕ್ಷೆ ಸುನೀತಾ ಕೆಂಭಾವಿ ಇವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಿಂಗಸುಗೂರು ಪುರಸಭೆ ಅಧಿಕಾರಿಗಳು ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಕೆ ಮಾಡದೆ ಕೇವಲ ಸಭೆ ಸಮಾರಂಭಗಳಲ್ಲಿ ಬ್ಯೂಜಿಯಾಗಿ ಕೆಲಸ ಮಾಡುತ್ತಿದ್ದಾರೆ ಹಾಗೂ ಪುರಸಭೆ ಮುಖ್ಯಾಧಿಕಾರಿ ಜಗನ್ನಾಥ ಜೋಷಿ ಇವರು ಸ್ಥಳಕ್ಕೆ ಭೇಟಿ ನೀಡದೆ ಕೇವಲ ಕಛೇರಿಯಲ್ಲಿ ಕುರ್ಚಿಗೆ ಅಂಟಿಕೊಂಡು ಕುಳಿತು ಕೊಳ್ಳುವ ಮೂಲಕ ಅಧಿಕಾರ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ನಗರದಲ್ಲಿ ಪ್ರತಿಯೊಂದು ವಾರ್ಡ್‌ಗಳಲ್ಲಿ ಸ್ವಚ್ಚತೆ ಇಲ್ಲದೆ ರೋಗ ಲಕ್ಷಣಗಳು ಗೋಚರಿಸುತ್ತಿವೆ. ಡೆಂಗ್ಯು ಮಲೇರಿಯಾ ಪ್ರಕರಣ ಈಗಾಗಲೇ ನಗರದಲ್ಲಿ ಸಾಕಷ್ಟು ಪ್ರಕರಣ ಬೆಳಕಿಗೆ ಬಂದಿದೆ. ಸ್ಲಂ ಕೊಳಚೆ ಪ್ರದೇಶಗಳ ಜನರ ಅಭಿವೃದ್ಧಿಗೆ ಪುರಸಭೆ ಆಡಳಿತ ಮಂಡಳಿ ಯಾವುದೇ ರೀತಿಯ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದರೆ ತಪ್ಪಾಗಲಾರದು.
೧೫ ನೇ ವಾರ್ಡ್‌ನ ಜನರಿಗೆ ಕೊಳಚೆ ನೀರು ನಲ್ಲಿಗಳ ಮೂಲಕ ಸರಬರಾಜು ಆಗುತ್ತಿದೆ. ಇದರಿಂದಾಗಿ ಬಹಳಷ್ಟು ಜನರಿಗೆ ಶುದ್ಧ ಕುಡಿಯುವ ನೀರು ಇಲ್ಲಿ ಮರಿಚಿಕೆಯಾಗಿದೆ ಎಂದು ವಾರ್ಡ್‌ನ ಜನರು ಖಾಲಿ ಕೊಡ ಪ್ರದರ್ಶನ ಮಾಡಿ ಪುರಸಭೆ ಆಡಳಿತ ಮಂಡಳಿ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ವಾರ್ಡ್‌ನ ನಿವಾಸಿಗಳಾದ ಅಸಮ್ಮತ ಮಹಾಂತೇಶ, ಅನೀಶ್, ಶರಣಪ್ಪಾ, ಬಸವರಾಜ, ರಾಬೀಯಾ ಹುಸೇನಬಿ, ಶಾಂತಮ್ಮ, ದುರಗಮ್ಮ, ಶೋಭಾ, ಯಲ್ಲಮ್ಮ, ಅಮರಮ್ಮ, ಈರಮ್ಮ, ವಿಜೆಯಮ್ಮ ಸೇರಿದಂತೆ ಇತರರು ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.