ಪುರಸಭೆ ಉದ್ಯಾನವನ ಸೌಂದರಿಕರಣಕ್ಕೆ ಒತ್ತಾಯ

ವಿಜಯಪುರ, ಸೆ.೨೧- ಇಲ್ಲಿನ ದೇವನಕುಂಟೆಯ ಸಮೀಪವಿರುವ ಪುರಸಭೆಯ ಉದ್ಯಾನವನದ ಪ್ರದೇಶ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿ ಪಾಳು ಬಿದ್ದಿದ್ದು, ಇಲ್ಲಿ ಸುಂದರ ಪಾರ್ಕ್ ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಸ್ಥಳೀಯ ನಿವಾಸಿ ರಾಜಣ್ಣ ಒತ್ತಾಯಿಸಿದ್ದಾರೆ.
ಇಲ್ಲಿ ತಾಂಡವವಾಡುತ್ತಿರುವ ಅಶುಚಿತ್ವ, ಗಿಡಗಂಟಿಗಳು ಬೆಳೆದು ಆಗಾಗ ಹಾವುಗಳ ದರ್ಶನ, ಸಮತಟ್ಟಾಗಿಲ್ಲದ ನೀರಿನ ಟ್ಯಾಂಕರುಗಳು ಸಂಚರಿಸುವ ರಸ್ತೆ, ಟ್ಯಾಂಕರುಗಳಿಗೆ ನೀರು ತುಂಬಿಕೊಂಡು ಹೋಗುವಾಗ ಕೆಸರಿನಲ್ಲಿ ಸಿಕ್ಕಿಕೊಂಡರೆ ಸಮೀಪದ ಮನೆಗಳವರು ಬಂದು ತಳ್ಳಬೇಕು. ಸಾಕಷ್ಟು ನೀರು ಇಲ್ಲೇ ಪೋಲಾಗಿ ಹೋಗುತ್ತವೆ.
ಪಾರ್ಕಿನಲ್ಲಿ ನೀರಿನ ಸಂಪು ನಿರ್ಮಾಣ ಮಾಡಿದ್ದಾರೆ. ಅದು ಉಪಯೋಗಕ್ಕೆ ಬರುತ್ತಿಲ್ಲ. ಸಂಜೆಯಾದರೆ ಕುಡುಕರಿಗೆ ಆಶ್ರಯತಾಣವಾಗಿದ್ದು, ರಾತ್ರಿಯಲ್ಲಿ ಕುಡಿಕರು ಕುಡಿದು ಗಲಾಟೆ ಮಾಡುತ್ತಿರುತ್ತಾರೆ. ಬಯಲಿನಲ್ಲಿ ನಿಂತಲ್ಲೆ ನಿಂತಿರುವ ಕೊಳಚೆ ನೀರಿನಿಂದಾಗಿ ಸಂಜೆಯಾದರೆ ಸುತ್ತಮುತ್ತಲಿನಲ್ಲಿ ಬೀರುತ್ತಿರುವ ದುರ್ವಾಸನೆಯಿಂದಾಗಿ ಸಮೀಪದಲ್ಲಿ ವಾಸಮಾಡುತ್ತಿರುವ ಜನರು ನಿತ್ಯ ನರಕ ಅನುಭವಿಸುವಂತಾಗಿದೆ.
ಒಳಚರಂಡಿ ಮಂಡಳಿಯಿಂದ ೧೧.೫ ಕೋಟಿ ವೆಚ್ಚದಡಿಯಲ್ಲಿ ೩ ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಬೃಹತ್ ಗಾತ್ರದ ಮೇಲ್ಮಟ್ಟ ನೀರಿನ ಸಿಸ್ಟನ್ ನಿಂದ ಸಿಮೆಂಟ್ ಪ್ಲಾಸ್ಟರಿಂಗ್ ಉದುರುತ್ತಿದೆ. ಈ ಟ್ಯಾಂಕಿನ ಕಾಮಗಾರಿ ಕಳಪೆಯಾಗಿದ್ದು ಕಾಮಗಾರಿಯ ಗುಣಮಟ್ಟದ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಸ್ಥಳೀಯ ನಿವಾಸಿ ಶ್ರೀನಿವಾಸ್ ಮಾತನಾಡಿ, ಪುರಸಭೆಯ ಪಾರ್ಕಿನ ಜಾಗವು ಒತ್ತುವರಿಯಾಗಿರುವ ಬಗ್ಗೆ ಅನುಮಾನಗಳಿವೆ. ಈ ಬಗ್ಗೆ ಸರ್ವೆ ಮಾಡಿಸಿ, ಒತ್ತುವರಿಯನ್ನು ತೆರವುಗೊಳಿಸಿ ಕಾಂಪೌಂಡ್ ನಿಗದಿಗೊಳಿಸುವಂತೆ ಅನೇಕ ಬಾರಿ ಪುರಸಭೆಗೆ ಅರ್ಜಿಗಳು ಕೊಟ್ಟಿದ್ದರೂ ಇದುವರೆಗೂ ಸರ್ಕಾರಿ ಸ್ವತ್ತು ಉಳಿಸಿಕೊಳ್ಳುವಂತಹ ಪ್ರಯತ್ನವನ್ನು ಅಧಿಕಾರಿಗಳು ಮಾಡುತ್ತಿಲ್ಲ. ಒಂದು ದಿನವೂ ಮುಖ್ಯಾಧಿಕಾರಿಯಾಗಲಿ, ಎಂಜಿನಿಯರುಗಳಾಗಲಿ ಈ ಕಡೆಗೆ ಬಂದಿಲ್ಲ. ಈ ಪಾರ್ಕಿಗೆ ಗೇಟ್ ಇಲ್ಲದ ಕಾರಣ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ರಾತ್ರಿಯಾದರೆ ಹೆಣ್ಣು ಮಕ್ಕಳು ಓಡಾಡಲಿಕ್ಕೆ ಭಯಪಡುವಂತಹ ವಾತಾವರಣ ನಿರ್ಮಾಣವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು. ಪಾರ್ಕ್ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್ ಮಾತನಾಡಿ, ದೇವನಕುಂಟೆಯ ಜಾಗ ಪಟ್ಟಣದಲ್ಲಿರುವುದರಿಂದ ಮೂರು ಕಡೆ ಕಾಂಪೌಂಡ್ ನಿರ್ಮಾಣವಾಗಿದೆ. ಅದು ಕಂದಾಯ ಇಲಾಖೆಗೆ ಸೇರಿದ್ದು, ಕೆಲವರು ಈ ಜಾಗದ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿರುವುದರಿಂದ ಇದುವರೆಗೂ ಕಾಂಪೌಂಡ್ ಪೂರ್ಣಗೊಳಿಸಲಿಕ್ಕೆ ಸಾಧ್ಯವಾಗಿಲ್ಲ.ಯುಜಿಡಿ ಪೈಪ್ ಲೈನ್ ಹಾದು ಹೋಗಿರುವುದರಿಂದ ನೀರು ನಿಲ್ಲುವಂತಾಗಿದೆ. ೧೫ ನೇ ಹಣಕಾಸಿನ ಯೋಜನೆಯಡಿ ಕಾಂಪೌಂಡ್ ನಿರ್ಮಾಣಕ್ಕಾಗಿ ಕ್ರಿಯಾಯೋಜನೆ ತಯಾರು ಮಾಡಿದ್ದೇವೆ. ಅನುಮೋದನೆಗೆ ಕಳುಹಿಸಿದ್ದೇವೆ. ಅನುಮೋದನೆ ಮಾಡಿದ ನಂತರ ಕಾಮಗಾರಿ ಶುರು ಮಾಡಲಾಗುತ್ತದೆ.