ಪುರಸಭೆ ಅಧ್ಯಕ್ಷರಿಂದ ಭಾರೀ ಲಂಚದ ಬೇಡಿಕೆ

ತಿ.ನರಸೀಪುರ: ಮಾ.17:- ನಿವೇಶನಗಳ ಖಾತೆ ಬದಲಾವಣೆ ಸಂಬಂಧ ಪಟ್ಟಣದ ಪುರಸಭೆ ಅಧ್ಯಕ್ಷರು ವ್ಯಕ್ತಿಯೊಬ್ಬರಿಂದ ದೊಡ್ಡ ಮೊತ್ತದ ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಸೇವಾಶ್ರಯ ಫೌಂಡೇಶನ್ ಅಧ್ಯಕ್ಷ ಮಣಿಕಂಠ ರಾಜ್ ಗೌಡ ಆರೋಪಿಸಿದರು.
ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ಕರೋಹಟ್ಟಿ ಮಲ್ಲಣ್ಣ ಎಂಬುವರು ಇತ್ತೀಚಿಗಷ್ಟೇ ಪಟ್ಟಣದ ಪುರಸಭಾ ವ್ಯಾಪ್ತಿಯ ಹೆಳವರಹುಂಡಿಯ ದಾಖಲೆ ಸಂಖ್ಯೆ 2405969 ಪೈಕಿ ನಾಲ್ಕು ನಿವೇಶನಗಳನ್ನು ಮಾರಾಟ ಮಾಡಿದ್ದರು. ಈ ಸಂಬಂಧ ಪುರಸಭೆಯ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿಯು ನಿವೇಶನ ಖರೀದಿದಾರರಿಗೆ ಖಾತೆ ಮಾಡಿಕೊಡಲು ಮಾರಾಟಗಾರರಾದ ಮಲ್ಲಣ್ಣರಿಂದ 10 ಲಕ್ಷ ರೂಗಳ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದರು.
ಲಂಚದ ಹಣ ನೀಡಲು ನಿರಾಕರಿಸಿದ ಮಲ್ಲಣ್ಣರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಲ್ಲದೆ ಅವರ ಮೊಬೈಲ್ ನ್ನು ಕಿತ್ತುಕೊಂಡಿರುತ್ತಾರೆ.ಈ ಹಿಂದೆಯೂ ನಂಜುಂಡಸ್ವಾಮಿಯನ್ನು ಭೈರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತರು ಬಂಧಿಸಿದ್ದರು.ಈಗಲೂ ಕೂಡ ಅವರು ಭ್ರಷ್ಟಾಚಾರವನ್ನು ನಿರಂತರವಾಗಿ ಮುಂದುವರೆಸಿರುತ್ತಾರೆ.
ಹಾಗಾಗಿ ನಂಜುಂಡಸ್ವಾಮಿ ಒಬ್ಬ ಕಡುಭ್ರಷ್ಟ ಪುರಸಭೆ ಅಧ್ಯಕ್ಷರಾಗಿದ್ದು,ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಇವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕು.ಅಲ್ಲದೆ ಪುರಸಭೆಯ ಮುಖ್ಯಾಧಿಕಾರಿಗಳು ಭ್ರಷ್ಟ ಅಧ್ಯಕ್ಷನ ಭ್ರಷ್ಟಚಾರದ ಬಗ್ಗೆ ತನಿಖೆ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆದು ಅವರನ್ನು ಅಧ್ಯಕ್ಷ ಸ್ಥಾನದಿಂದ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.
ಶಾಸಕರು ಭ್ರಷ್ಟ ವ್ಯಕ್ತಿಯನ್ನು ಪುರಸಭೆ ಅಧ್ಯಕ್ಷನ್ನಾಗಿ ಮಾಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ.ಇಂತಹ ಲಂಚಬಾಕ ಪುರಸಭಾ ಅಧ್ಯಕ್ಷನಿಂದ ವರುಣಾ ಮತ್ತು ತಿ.ನರಸೀಪುರ ಕ್ಷೇತ್ರ ವ್ಯಾಪ್ತಿ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗಲಿದೆ.ಹಾಗಾಗಿ ಇಂತಹ ಭ್ರಷ್ಟ ವ್ಯಕ್ತಿಯನ್ನು ಅಧ್ಯಕ್ಷತನದಿಂದ ಶೀಘ್ರವೇ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು.
ಸಂತ್ರಸ್ತ ಮಲ್ಲಣ್ಣ ಮಾತನಾಡಿ, ನಾನು ಮತ್ತು ನಾರಾಯಣ ಎಂಬುವರು ಪುರಸಭೆ ವ್ಯಾಪ್ತಿಯ ಹೆಳವರಹುಂಡಿ ಗ್ರಾಮದಲ್ಲಿ 12ಗುಂಟೆ ಜಮೀನು ಖರೀದಿ ಮಾಡಿದ್ದು,ಅದನ್ನು ಅಲಿನೇಷನ್ ಮಾಡಿಸಿ ಇತ್ತೀಚಿಗೆ ನಾಲ್ಕು ನಿವೇಶನಗಳನ್ನು ಬೇರೆ ವ್ಯಕ್ತಿಗಳಿಗೆ ಮಾರಾಟ ಮಾಡಲಾಗಿತ್ತು.ಈ ನಡುವೆ ಪುರಸಭೆ ಅಧ್ಯಕ್ಷರಾದ ನಂಜುಂಡಸ್ವಾಮಿ ನನಗೆ ಕರೆ ಮಾಡಿ ನಿಮ್ಮ ನಿವೇಶನಗಳ ಖಾತೆ ಊರ್ಜಿತ ಮಾಡಲು ನನಗೆ 10ಲಕ್ಷ ರೂಗಳನ್ನು ನೀಡಬೇಕು ಎಂದು ಒತ್ತಾಯ ಮಾಡಿದ್ದರು.
ಈ ಬಗ್ಗೆ ಮಾತನಾಡಲು ಅಜ್ಞಾತ ಸ್ಥಳಕ್ಕೆ ನನ್ನನ್ನು ಕರೆದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡಲು ನಿರಾಕರಿಸಿದ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿ ನನ್ನ ಮೊಬೈಲ್ ಕಸಿದುಕೊಂಡಿದ್ದಾರೆ.ಹಾಗಾಗಿ ನನಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸೇವಾಶ್ರಯ ಫೌಂಡೇಶನ್ ಕಾರ್ಯದರ್ಶಿ ಕ್ರೇಜಿ ಸುರೇಶ್ ಇತರರು ಹಾಜರಿದ್ದರು.