ಪುರಸಭೆ: ಅಧಿಕಾರ ಹಸ್ತಾಂತರ

ಗುಳೇದಗುಡ್ಡ,ಮಾ 27: ಪಟ್ಟಣದ ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿಯಾಗಿದ್ದ ಜ್ಯೋತಿ ಗಿರೀಶ ಅವರು ಪುರಸಭೆ ಸಿಬ್ಬಂದಿಯಾದ ಚಿದಾನಂದ ಎಸ್. ಮಠಪತಿ ಅವರಿಗೆ ಜಟಾಪಟಿಯಲ್ಲಿ ಅಧಿಕಾರವನ್ನು ಹಸ್ತಾಂತರಿಸಿದ ಘಟನೆ ಗುರುವಾರ ನಡೆಯಿತು. ಬಾದಾಮಿ ಪುರಸಭೆ ಮುಖ್ಯಾಧಿಕಾರಿ ಆಗಿರುವ ಜ್ಯೋತಿ ಗಿರೀಶ ಅವರು ಗುಳೇದಗುಡ್ಡ ಪುರಸಭೆಗೆ ಪ್ರಭಾರಿಯಾಗಿದ್ದರು. ಅವರು ವಾರದಲ್ಲಿ 3 ದಿನ ಗುಳೇದಗುಡ್ಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸರ್ಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿ ಅವರು ಚಿದಾನಂದ ಎಸ್. ಮಠಪತಿ ಅವರಿಗೆ ಪುರಸಭೆ ಮುಖ್ಯಾಧಿಕಾರಿಯಾಗಿ ಆದೇಶ ನೀಡಿದ್ದರು. ಅದನ್ನು ಮಧ್ಯಾಹ್ನ ಪುರಸಭೆಯಲ್ಲಿ ಜ್ಯೋತಿ ಗಿರೀಶ ಅವರಿಗೆ ಮಠಪತಿ ಅವರು ತೋರಿಸಿದ ತಕ್ಷಣ ಪ್ರಭಾರಿ ಮುಖ್ಯಾಧಿಕಾರಿ ಅವರು ಆದೇಶವನ್ನು ಒಪ್ಪಲಿಲ್ಲ. ಮಠಪತಿಗೆ ಅಧಿಕಾರ ಹಸ್ತಾಂತರಿಸಲು ಜ್ಯೋತಿ ಗಿರೀಶ ಅವರು ಮೀನಮೇಷ ಮಾಡಿದರು. ಈ ಸಂದರ್ಭದಲ್ಲಿ ಮಠಪತಿ ಅವರ ಪರವಾಗಿ ಪುರಸಭೆ ಕೆಲವು ಸದಸ್ಯರು ಜ್ಯೋತಿ ಗಿರೀಶ ಜೊತೆಗೆ ವಾಗ್ವಾದಕ್ಕಿಳಿದರು. ಇಷ್ಟಾದರೂ ಜ್ಯೋತಿ ಗಿರೀಶ ಅವರು ಜಗ್ಗಲಿಲ್ಲ. ಸುಮಾರು ಅರ್ಧಗಂಟೆಯವರೆಗೆ ನಡೆದ ಅಧಿಕಾರ ಹಸ್ತಾಂತರದ ಹೈಡ್ರಾಮಾ ಕೊನೆಗೆ ಸುಕಾಂತ್ಯದಲ್ಲಿ ಮುಗಿಯಿತು. ನಂತರ ಪ್ರಭಾರಿ ಮುಖ್ಯಾಧಿಕಾರಿ ಜ್ಯೋತಿ ಗಿರೀಶ ಅವರು ಸಿ.ಎಸ್. ಮಠಪತಿ ಅವರಿಂದ ಆದೇಶ ಪತ್ರ ಪಡೆದು ತಮ್ಮ ಅಧಿಕಾರವನ್ನು ಮಠಪತಿಗೆ ಹಸ್ತಾಂತರಿಸಿದರು. ಈ ವೇಳೆಯಲ್ಲಿ ಪ್ರಕಾಶ ಮುರಗೋಡ, ವೈ.ಆರ್. ಹೆಬ್ಬಳ್ಳಿ, ಸದಸ್ಯರಾದ ಸಂತೋಷ ನಾಯನೇಗಲಿ, ಉಮೇಶ ಹುನಗುಂದ, ರಫೀಕ್ ಕಲಬುರ್ಗಿ ಸಾಥ ನೀಡಿದರು.