ಪುರಸಭೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.21: ಪಟ್ಟಣದ ಪುರಸಭೆಗೆ ಸೇರುವ ವಾಣಿಜ್ಯ ಮಳಿಗೆಗಳನ್ನು ಸರ್ಕಾರಿ ಆದೇಶವಿದ್ದರೂ ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲವೆಂದು ಆರೋಪಿಸಿ ಪಟ್ಟಣದ ಗಾಣಿಗರ ಬೀದಿಯ ನಿವಾಸಿ ಮೋಹನ್‍ಕುಮಾರ್ ಎಂಬುವವರು ಮಂಡ್ಯ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಒಟ್ಟು 146 ವಾಣಿಜ್ಯ ಮಳಿಗೆಗಳು ಇದ್ದು ಇದರಲ್ಲಿ 126 ಮಳಿಗೆಗಳ ಹರಾಜು ಪ್ರಕ್ರಿಯೆಯು ಸುಮಾರು 20 ವರ್ಷಗಳ ಅವಧಿ ಮೀರಿದೆ. ಹೀಗಿದ್ದರೂ ಪುರಸಭಾ ಅಧಿಕಾರಿಗಳು ಹೊಸದಾಗಿ ಹರಾಜು ಪ್ರಕ್ರಿಯೆ ನಡೆಸದೇ ಸುಮ್ಮನೆ ಕಾಲ ಕಳೆಯುತ್ತಿದ್ದಾರೆ. ಈ ಕುರಿತು ಸರ್ಕಾರಿ ಆದೇಶವಿದ್ದರೂ ಪ್ರಭಾವಿಗಳ ಕ್ರಮಕ್ಕೆ ಮಣಿದು ಮತ್ತು ಸರ್ಕಾರಿ ಆದೇಶಗಳನ್ನು ಗಾಳಿಗೆ ತೂರಿ ಪುರಸಭೆಗೆ ಬರಬೇಕಾಗಿರುವ ಆದಾಯಕ್ಕೆ ನಷ್ಟವನ್ನುಂಟುಮಾಡಿದ್ದಾರೆ. ಆದ್ದರಿಂದ ಪುರಸಭಾ ಮುಖ್ಯಾಧಿಕಾರಿ ಮತ್ತು ಅಧಿಕಾರಿಗಳ ವಿರುದ್ದ ಸೂಕ್ರ ಕ್ರಮ ಜರುಗಿಸಬೇಕು.
ಒಂದು ವೇಳೆ ಸರ್ಕಾರದ ನಿಯಮಗಳನ್ನು ಪಾಲಿಸಿ ಹರಾಜು ಪ್ರಕ್ರಿಯೆ ನೆಡೆಸಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಕಛೇರಿ ನಡಾವಳಿ ಮತ್ತು ಇತರೆ ದಾಖಲೆಗಳ ದೃಢೀಕೃತ ನಕಲನ್ನು ಕೊಡಿಸಿಕೊಡಬೇಕೆಂದು ಮೋಹನ್‍ಕುಮಾರ್ ಮನವಿ ಮಾಡಿದ್ದಾರೆ.