ಪುರಸಭೆಯಲ್ಲಿ ಜೆ.ಡಿ.ಎಸ್ ಅಧಿಕಾರ ಖಚಿತ

ವಿಜಯಪುರ, ಏ-೨೯ ಕಳೆದ ೮ ವರ್ಷಗಳಿಂದ ಪ್ರಜಾಪ್ರಭುತ್ವವನ್ನು ಹಾಳು ಮಾಡಿದ್ದ ಕಾಂಗ್ರೆಸ್ ಪಕ್ಷವನ್ನು ವಿಜಯಪುರ ಪುರಸಭೆಯಲ್ಲಿ ಕಿತ್ತು ಹಾಕಲಿರುವ ಮತದಾರರು ಜೆ.ಡಿ.ಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಪ್ರಜಾಪ್ರಭುತ್ವವನ್ನು ಪುನರ್ ಸ್ಥಾಪಿಸಲಿರುವರೆಂದು, ತಾಲೂಕು ಜೆ.ಡಿ.ಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಸೀಫ್ ತಿಳಿಸಿದರು.
ಅವರು ಚುನಾವಣೆ ನಂತರ ವರದಿಗಾರರೊಂದಿಗೆ ಮಾತನಾಡಿ, ಪಟ್ಟಣದ ೨೩ ವಾರ್ಡ್‌ಗಳಲ್ಲಿಯೂ ಜೆ.ಡಿ.ಎಸ್ ಪಕ್ಷವನ್ನು ಬೆಂಬಲಿಸಿ, ಮತದಾರರು ಮತ ಚಲಾಯಿಸಿದ್ದು, ಎಲ್ಲೆಡೆ ಜೆ.ಡಿ.ಎಸ್ ಪಕ್ಷದ ಮೇಲಿನ ಒಲವು ಕಂಡು ಬರುತ್ತಿದ್ದು, ಶಾಸಕ ನಿಸರ್ಗ ನಾರಾಯಣಸ್ವಾಮಿರವರು ಸಹ ಪಟ್ಟಣದೆಲ್ಲೆಡೆ ಒಂದು ವಾರ ಕಾಲ ಅಭ್ಯರ್ಥಿಗಳೊಂದಿಗೆ ಪ್ರಚಾರ ಕಾರ್ಯ ನಡೆಸಿದ್ದು, ಜನತೆಯಿಂದ ಅಪರಿಮಿತ ಬೆಂಬಲ ವ್ಯಕ್ತವಾಗಿತ್ತು.
ಆದರೆ ಕಾಂಗ್ರೆಸ್ ಪಕ್ಷದ ವತಿಯಿಂದ ಪುರಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ, ಪ್ರಚಾರ ಮಾಡಲು ಕಾಂಗ್ರೆಸ್ ಪಕ್ಷದ ಯಾವೊಬ್ಬ ಮುಖಂಡರುಗಳು ಆಗಮಿಸದಿದ್ದುದು, ಕಳೆದ ೮ ವರ್ಷಗಳ ಕಾಂಗ್ರೆಸ್ ಪಕ್ಷದ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದರು.
ಈ ಬಾರಿ ಏನೇ ಆದರೂ, ವಿಜಯಪುರ ಪುರಸಭೆಯಲ್ಲಿ ಜೆ.ಡಿ.ಎಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಒಬ್ಬರನ್ನೊಬ್ಬರು ವಿಶ್ವಾಸದಿಂದ ನಡೆಸಿಕೊಂಡು, ಮತ್ತೆ, ಮತ್ತೆ ನ್ಯಾಯಾಲಯಕ್ಕೆ ಹೋಗಿ, ಪ್ರಜಾಪ್ರಭುತ್ವವನ್ನು ನಾಚಿಕೆಗೇಡು ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗದಿರಲಿ ಎಂದು ತಿಳಿಸಿದರು.