ಪುರಸಭೆಯಲ್ಲಿನ ಬ್ರಚ್ಟಾಚಾರದ ಬಗ್ಗೆ ಸಮಗ್ರ ತನಿಖೆಗೆ ಮನವಿ

ಕೆ.ಆರ್.ಪೇಟೆ: ಜ.19:- ಪುರಸಭೆಯ ಅಧ್ಯಕ್ಷೆ ಮಹದೇವಿ ನಂಜುಂಡ ಅವರ ವಿರುದ್ದ ಬಂಡೆದ್ದರಿರುವ ಆಡಳಿತಾರೂಢ ಬಿಜೆಪಿ ಪಕ್ಷದ ಆರು ಜನ ಚುನಾಯಿತ ಮತ್ತು ನಾಲ್ವರು ನಾಮಿನಿ ಸದಸ್ಯರು ಪುರಸಭೆಯಲ್ಲಿನ ಬ್ರಚ್ಟಾಚಾರದ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪುರಸಭಾ ಸದಸ್ಯರಾದ ಎನ್.ನಟರಾಜ್ ಮತ್ತು ಹೆಚ್.ಆರ್.ಲೋಕೇಶ್ ಅವರ ನೇತೃತ್ವದಲ್ಲಿ ಪುರಸಭಾ ಕಾರ್ಯಾಲಯಕ್ಕೆ ಆಗಮಿಸಿದ ಬಂಡಾಯ ಸದಸ್ಯರು ಸ್ಪಪಕ್ಷೀಯ ಅಧ್ಯಕ್ಷರ ವಿರುದ್ದ ತನಿಖೆಗೆ ಒತ್ತಾಯಿಸಿ ಮನವಿ ಪತ್ರ ಅರ್ಪಿಸಿದ ಅನಂತರ ಸುದ್ದಿಗೋಷ್ಠಿ ನಡೆಸಿ ಅಧ್ಯಕ್ಷರ ವಿರುದ್ದ ಆರೋಪಗಳ ಸುರಿಮಳೆಗೈದರು.
ಪುರಸಭೆಯ ಎಲ್.ಇ.ಡಿ ಲೈಟ್ ಖರೀದಿಯಲ್ಲಿ ಭಾರತೀ ಪ್ರಮಾನದ ಅಕ್ರಮ ನಡೆದಿದೆ. ಮಾರುಕಟ್ಟೆಯ ದರಕ್ಕೆ 15 ಪಟ್ಟು ಹೆಚ್ಚುವರಿ ಹಣ ನೀಡಿ ಎಲ್‍ಇಡಿ ಖರೀದಿ ಮಾಡಲಾಗಿದೆ. ಜೊತೆಗೆ ಅಳವಡಿಸಿರುವ ಎಲ್‍ಇಡಿ ಲೈಟುಗಳು ಕಳಪೆಯಾಗಿವೆ. ಸುಗಮ ಆಡಳಿತದ ದೃಷ್ಠಿಯಿಂದ ಸುಮಾರು 30 ಲಕ್ಷ ರೂಗಳವರೆಗೆ ಕಾಮಗಾರಿ ನಿರ್ವಹಣೆ ಮಾಡುವ ಅಧಿಕಾರವನ್ನು ಪುರಸಭೆ ಅಧ್ಯಕ್ಷರಿಗೆ ನೀಡಲಾಗಿದೆ. ಆದರೆ ಅಧ್ಯಕ್ಷೆ ಮಹದೇವಿ ತಮ್ಮ ವಿವೇಚಾನಾಧಿಕಾರಿವನ್ನು ದುರುಪಯೋಗ ಮಾಡಿಕೊಂಡು ಮನಸೋ ಇಚ್ಚೆ ಸಾರ್ವಜನಿಕರ ಹಣವನ್ನು ವ್ಯ ಮಾಡಿದ್ದಾರೆ. ಆದಕಾರಣ ಅಧ್ಯಕ್ಷರ ವಿವೇಚನಾ ಅಧಿಕಾರವನ್ನು ರದ್ದುಗೊಳಿಸಬೇಕು. ವಿವಿಧ ವಾರ್ಡುಗಳಿಗೆ ನಾಮಫಲಕ ಅಳವಡಿಸುವ ಕಾಮಗಾರಿಯಲ್ಲಿ ವ್ಯಾಪಕ ಬ್ರಷ್ಟಾಚಾರ ನಡೆದಿದೆ. ಒಂದು ನಾಮಫಲಕ ಅಳವಡಿಸಲು 3 ಸಾವಿರ ವೆಚ್ಚ ತಗುಲಿದರೆ ಪುರಸಭೆ ಇದಕ್ಕೆ 18 ಸಾವಿರ ರೂ ಬಿಲ್ ಮಾಡಿದೆ. ಇಂತಹ ಹಗಲು ದರೋಡೆಯ ಕಾಮಗಾರಿ ಬಿಲ್ ತಡೆದು ತನಿಖೆಗೆ ಒಳಪಡಿಸಬೇಕು. ಪುರಸಭೆಯ ಅಭಿವೃದ್ದಿಗಾಗಿ ಸಚಿವ ಕೆ.ಸಿ.ನಾರಾಯಣಗೌಡ 7 ಕೋಟಿ ಅನುದಾನ ತಂದಿದ್ದಾರೆ. ಆದರೆ ಟೆಂಡರ್ ಪ್ರಕ್ರಿಯೆಗೆ ಮುನ್ನವೇ ಕೆಲವು ಗುತ್ತಿಗೆದಾರರ ಹೆಸರಿಗೆ ಟೆಂಡರ್ ನಿಲ್ಲಿಸಲಾಗಿದೆ. ವಿಶೇಷ ಅನುದಾನದಲ್ಲಿ ಮಂಜೂರಾಗಿರುವ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿ ಅನರ್ಹ ಗುತ್ತಿಗೆದಾರರನ್ನು ಕೈಬಿಟ್ಟು ಪಾರದರ್ಶಕತೆಯನ್ನು ಕಾಪಾಡಬೇಕು. ಪುರಸಭೆಯ ಸದಸ್ಯರನ್ನು ಕಡೆಗಣಿಸಿ ಅಧ್ಯಕ್ಷರು ಕಾರ್ಯನಿರ್ವಹಿಸುತ್ತಿದ್ದಾರೆ. ಪುರಸಭೆಯಲ್ಲಿ ಆಗಬೇಕಾದ ಕೊಟೇಷನ್ ಮತ್ತು ಟೆಂಡರ್‍ಗಳು ಮತ್ತು ಸರ್ಕಾರದ ಸುತ್ತೋಲೆಗಳನ್ನು ಯಥಾವತ್ತಾಗಿ ಸದಸ್ಯರ ಗಮನಕ್ಕೆ ತರಬೇಕು. ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಮಾಡಿ ಸ್ಥಾಯಿ ಸಮಿತಿ ರಚಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿರುವ ಸದಸ್ಯರು ಸ್ಥಾಯಿ ಸಮಿತಿ ರಚನೆಯಾಗುವವರೆಗೆ ಗುರುವಾರ ( ಜನವರಿ 19) ಕರೆದಿರುವ ಪುರಸಭೆ ಆಯ-ವ್ಯಯ ಸಭೆಯನ್ನು ಮುಂದೂಡುವಂತೆ ಒತ್ತಾಯಿಸಿದರು.
ಪುರಸಭೆಯ ಅಧ್ಯಕ್ಷೆ ಮಹದೇವಿ ಅವರ ಆಡಳಿತದ ಬ್ರಷ್ಟಾಚಾರದ ಸಮಗ್ರ ತನಿಖೆಗೆ ಒತ್ತಾಯಿಸಿ ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಪೌರಾಡಳಿತ ಇಲಾಕೆಗೆ ಪತ್ರ ಬರೆಯಲಾಗಿದೆ. ಕ್ಷೇತ್ರದ ಶಾಸಕರಾದ ಸಚಿವ ಕೆ.ಸಿ.ನಾರಾಯಣಗೌಡರ ಗಮನಕ್ಕೂ ತರಲಾಗಿದೆ. ನಮ್ಮ ಬೇಡಿಕೆ ಈಡೇರದಿದ್ದರೆ ಪಟ್ಟಣದ ಜನರ ಹಿತದೃಷ್ಠಿಯಿಂದ ಆಡಳಿತ ಪಕ್ಷಕ್ಕೆ ಸೇರಿದ ನಾವುಗಳೇ ಹೋರಾಟದ ದಾರಿ ತುಳಿಯಬೇಕಾಗುತ್ತದೆ. ಅಗತ್ಯ ಬಿದ್ದರೆ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಧರಣಿ ನಡೆಸುತ್ತೇವೆಂದು ಬಂಡಾಯ ಸದಸ್ಯರು ಎಚ್ಚರಿಸಿದರು.
ಸದಸ್ಯರು ನೀಡಿದ ಮನವಿ ಪತ್ರವನ್ನು ಸ್ವೀಕರಿಸಿದ ಪುರಸಭೆಯ ಮುಖ್ಯಾಧಿಕಾರಿ ಬಸವರಾಜು ಮನವಿ ಪರಿಶೀಲನೆಯ ಭರವಸೆ ನೀಡಿದರು. ಚುನಾಯಿತ ಸದಸ್ಯರಾದ ನಟರಾಜ್, ಹೆಚ್.ಆರ್.ಲೋಕೇಶ್, ತಿಮ್ಮೇಗೌಡ, ಬಿ.ಜಿ.ಗಿರೀಶ್, ಎಸ್.ಜೆ.ಕಲ್ಪನಾ, ಪದ್ಮ, ನಾಮಿನಿ ಸದಸ್ಯರಾದ ಕೆ.ಎಸ್.ರಾಜೇಶ್, ಕೆ.ಆರ್.ನೀಲಕಂಠ, ಕೆ.ಎನ್.ಮಹೇಶ್ ಮತ್ತು ಕೆ.ಆರ್.ತೇಜಸ್ವಿನಿ ಮತ್ತಿತರರಿದ್ದು ಮನವಿ ಪತ್ರ ಸಲ್ಲಿಸಿದರು.