ಪುರಸಭಾ ಉಪಾಧ್ಯಕ್ಷರಾಗಿ ನಾಗರತ್ನ ಮಾದೇಶ್ ಅವಿರೋಧ ಆಯ್ಕೆ

ತಿ.ನರಸೀಪುರ. ಜು.14:- ಪುರಸಭೆಯ ಉಪಾಧ್ಯಕ್ಷ ಗಾದಿಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯೆ ನಾಗರತ್ನ ಮಾದೇಶ್ ಅವಿರೋಧವಾಗಿ ಆಯ್ಕೆಗೊಂಡರು. ನಿಕಟಪೂರ್ವ ಉಪಾಧ್ಯಕ್ಷೆ ಪ್ರೇಮ ಮರಯ್ಯರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಗೊಂಡಿತ್ತು.ನಾಗರತ್ನ ಮಾದೇಶ್ ಮಾತ್ರ ತಮ್ಮ ಉಮೇದುವಾರಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸಿ.ಜೆ.ಗೀತಾ ನಾಗರತ್ನ ರವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಪುರಸಭೆಯು 23 ಸದಸ್ಯರ ಸಂಖ್ಯಾಬಲ ಹೊಂದಿದ್ದು ಚುನಾವಣೆಯಲ್ಲಿ ಅಧ್ಯಕ್ಷ ಮದನ್ ರಾಜ್, ಸದಸ್ಯರುಗಳಾದ ಎನ್. ಸೋಮು, ಟಿ.ಎಂ. ನಂಜುಂಡಸ್ವಾಮಿ, ಮೆಡಿಕಲ್ ನಾಗರಾಜು, ಬಾದಾಮಿ ಮಂಜು, ಬೇಬಿ ಹೇಮಂತ್, ಪ್ರೇಮಾ ಮರಯ್ಯ, ಮಹದೇವಮ್ಮ, ಜೆಡಿಎಸ್ ನ ತುಂಬಲಾ ಪ್ರಕಾಶ್, ಮೋಹನ್,ಸಿಸ್ಟಮ್ ಸಿದ್ದು, ಪಕ್ಷೇತರರಾದ ಸಯಿದ್ ಅಹ್ಮದ್,ವಸಂತ ಶ್ರೀಕಂಠ, ಉಪಸ್ಥಿತರಿದ್ದು ಉಪಾಧ್ಯಕ್ಷರ ಆಯ್ಕೆಗೆ ಅನುಮೋದನೆ ಸಲ್ಲಿಸಿದರು.
ಉಪ ತಹಶೀಲ್ದಾರ್ ಜೆ.ಕೆ. ಪ್ರಭುರಾಜ್ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಉಪಾಧ್ಯಕ್ಷರಾಗಿ ಆಯ್ಕೆಯಾದ ನಾಗರತ್ನ ಮಾದೇಶ್ ರನ್ನು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ,ನಾಗರತ್ನ ಮಾದೇಶ್ ರವರ ಆಯ್ಕೆಗೆ ಸಹಕರಿಸಿದ ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರಿಗೆ ಧನ್ಯವಾದ ತಿಳಿಸಿದರು.ಪಕ್ಷಬೇಧ ಮರೆತು ಎಲ್ಲ ಸದಸ್ಯರ ವಿಶ್ವಾಸದೊಂದಿಗೆ ಪುರಸಭೆಯ ಅಭಿವೃದ್ಧಿ ಕೆಲಸ ಮಾಡುವಂತೆ ನೂತನ ಉಪಾಧ್ಯಕ್ಷರಿಗೆ ಅವರು ಕಿವಿಮಾತು ಹೇಳಿದರು.
ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್ ಮಾತನಾಡಿ, ನೂತನವಾಗಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ನಾಗರತ್ನ ಮಾದೇಶ್ ಗೆ ಶುಭಕೋರಿದರು. ಕಳೆದ ಅವಧಿಯಲ್ಲಿ ವರುಣಾ ವಿಧಾನ ಸಭಾ ವ್ಯಾಪ್ತಿಯ ಪುರಸಭಾ ಸದಸ್ಯರನ್ನು ಉಪಾಧ್ಯಕ್ಷರನ್ನಾಗಿ ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಿತ್ತು,ಈ ಬಾರಿ ತಿ. ನರಸೀಪುರ ವಿಧಾನ ಸಭಾ ವ್ಯಾಪ್ತಿಯಲ್ಲಿ ಗೆದ್ದಿರುವ ನಾಗರತ್ನರನ್ನು ಆಯ್ಕೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.