ಬೆಂಗಳೂರು,ಮಾ.೧೭- ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ೪೮ ನೇ ಹುಟ್ಟುಹಬ್ಬ ಇಂದು. ಪುನೀತ್ ಇಲ್ಲದೆ ಎರಡನೇ ಹುಟ್ಟುಹಬ್ಬ ಆಚರಿಸಲಾಗುತ್ತಿದೆ.
ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಪುನೀತ್ ರಾಜಕುಮಾರ್ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು.
ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಅವರ ಸಮಾಧಿಗೆ ಪೂಜಿ ಸಲ್ಲಿಸಿ ನಮನ ಸಲ್ಲಿಸಿದರು.ಅಭಿಮಾನಿಗಳು ಕೂಡ ಸ್ಟುಡಿಯೋ ಆವರಣದಲ್ಲಿರುವ ಸಮಾದಿಗೆ ನಮನ ಸಲ್ಲಿಸಿ, ಪುನೀತ್ ಅವರ ಗುಣಗಾನ ಮಾಡಿದರು.
ಪುನೀತ್ ರಾಜಕುಮಾರ್ ಅವರು ದೈಹಿಕವಾಗಿ ಜೊತೆಯಲ್ಲಿ ಇಲ್ಲದಿದ್ದರೂ ಮಾನಸಿಕವಾಗಿ ಸದಾ ಜೀವಂತವಾಗಿದ್ದಾರೆ ಅವರು ಇನ್ನಷ್ಟು ವರ್ಷ ಬದುಕಬೇಕಾಗಿತ್ತು ಎಂದು ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರನ್ನ ನೆನಪು ಮಾಡಿಕೊಂಡು ಬಹು ಭಾವುಕರಾಗಿದ್ದಾರೆ. ಸಮಾಧಿ ಬಳಿ ಪುನೀತ್ ಅಭಿಮಾನಿಗಳ ದಂಡು ಹರಿದು ಬಂತು ತಮ್ಮ ನೆಚ್ಚಿನ ನಟನನ್ನು ಸ್ಮರಿಸಿದರು.
ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋ ಆವರಣದಲ್ಲಿ ಅಭಿಮಾನಿಗಳಿಗೆ ಅನ್ನದಾನ ಮಾಡಲಾಯಿತು.

ರಾಜ್ಯಾದ್ಯಂತ ಕಾರ್ಯಕ್ರಮ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬವನ್ನು ಅಭಿಮಾನಿಗಳು ರಾಜ್ಯಾದ್ಯಂತ ಆಚರಿಸುತ್ತಿದ್ದಾರೆ. ಅಪ್ಪುಪುಣ್ಯಭೂಮಿಯಲ್ಲಿ ಬೆಳಗ್ಗೆ ಸಂಜೆ ೬ರ ತನಕ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯದ ನಾನಾ ಕಡೆಗಳಲ್ಲಿ ಅಭಿಮಾನಿಗಳು ಹಲವು ರೀತಿಯಲ್ಲಿ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ. ಅಪ್ಪು ನಮ್ಮೊಂದಿಗೆ ದೈಹಿಕವಾಗಿ ಇಲ್ಲವೆಂದರೆ ಸಂಭ್ರಮಕ್ಕೇನೂ ಕೊರತೆ ಕಾಣುತ್ತಿಲ್ಲ
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಬಳಿ ಅನ್ನ ಸಂತರ್ಪಣೆ ಹಾಗೂ ಸಂಜೆ ೬ ಗಂಟೆಗೆ ಅಪ್ಪು ಹಿಟ್ ಹಾಡುಗಳ ಸಂಗೀತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಡಾ.ರಾಜ್ ಕುಟುಂಬದ ಅನೇಕ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.