ಪುನೀತ್ ಸಾಮಾಜಿಕ ಕಳಕಳಿಯ ನಟರಾಗಿದ್ದರು: ಮೂಲಗೆ

ಕಲಬುರಗಿ:ನ.17: ಪುನೀತ್ ರಾಜಕುಮಾರ ಕೇವಲ ನಟರಾಗಿರದೇ ಒಬ್ಬ ಹೃದಯವಂತ, ಸಾಮಾಜಿಕ ಕಳಕಳಿ ಹೊಂದಿದ್ದರು. ಅವರನ್ನು ಕಳೆದುಕೊಂಡ ಕರುನಾಡಿಗೆ ತುಂಬಲಾಗದ ನಷ್ಟವಾಗಿದೆ ಎಂದು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠರಾವ್ ಮೂಲಗೆ ವಿಷಾದಿಸಿದರು.

ನಗರದ ಸೂಪರ್ ಮಾರ್ಕೆಟ್ ಸಿಟಿ ಬಸ್ ನಿಲ್ದಾಣದ ಆವರಣದಲ್ಲಿ ಹೆಚ್. ಶಿವರಾಮೇಗೌಡರ ಕರವೇ ಹಮ್ಮಿಕೊಂಡಿದ್ದ ಪುನೀತ್ ಸ್ಮರಣಾರ್ಥ ಅನ್ನ ಸಂತರ್ಪಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಪುನೀತ್ ಅವರು ಪ್ರತಿ ಕನ್ನಡಿಗನಿಗೂ, ಕನ್ನಡ ನಟರಿಗೂ ಆದರ್ಶಪ್ರಾಯರಾಗಿದ್ದಾರೆ. ಅವರ ಹೃದಯವಂತಿಕೆ, ಸಜ್ಜನಿಕೆಯನ್ನು ಇತರರು ಅಳವಡಿಸಿಕೊಳ್ಳಬೇಕು. ಅವರ ಜೀವನ ಎಲ್ಲರಿಗೂ ಆದರ್ಶವಾಗಿದೆ ಎಂದರು.

ರಂಗಾಯಣ ನಿರ್ದೇಶಕ ಪ್ರಭಾಕರ್ ಜೋಶಿ ಮಾತನಾಡಿ, ಬೆಳ್ಳಿ ತೆರೆಯ ನಟರಾಗಿದ್ದ ಪುನೀತ್ ಅವರ ಮನಸ್ಸು ಮತ್ತು ವಿಚಾರಗಳು ಬಂಗಾರದಂತಿದ್ದವು ಎಂದರು.

ಈ ಸಂದರ್ಭದಲ್ಲಿ ಬೀದಿ ವ್ಯಾಪಾರಿಗಳ ಸಂಘಟನೆ ಅಧ್ಯಕ್ಷರಾದ ಜಗನ್ನಾಥ ಸೂರ್ಯವಂಶಿ, ಚಲನಚಿತ್ರ ನಿರ್ಮಾಪಕ ಶರಣು ಕಾಳೆ, ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್, ಪದಾಧಿಕಾರಿಗಳಾದ ರವಿ ವಾಲಿ, ಪ್ರಲ್ಹಾದ್ ಹಡಗಿಲಕರ್, ದೀಪಕ ಶಹಾಪುರಕರ್, ಯಲ್ಲಯ್ಯ ಗುತ್ತೇದಾರ ಇನ್ನಿತರರಿದ್ದರು.