ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ರತ್ನ ಘೋಷಣೆ, ಸ್ಮಾರಕ ನಿರ್ಮಾಣ: ಸಿಎಂ

ಬೆಂಗಳೂರು, ನ.16- ಇತ್ತೀಚೆಗೆ ಅಗಲಿದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ” ಕರ್ನಾಟಕ ರತ್ನ” ಪ್ರಶಸ್ತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಪ್ರಕಟಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ‌ ನಡೆದ ಪುನೀತ್ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂದು ಶ್ರದ್ದಾಂಜಲಿ ಸಲ್ಲಿಸಿ ಅವರು ಈ ಘೋಷಣೆ ಮಾಡಿದ್ದಾರೆ.

ಡಾ. ರಾಜ್ ಕುಮಾರ್ ಅವರ ನಂತರ ಕನ್ನಡ ಚಿತ್ರರಂಗದ ಕಲಾವಿದರಿಗೆ ಮತ್ತೊಮ್ಮೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಕಟಿಸಲಾಗಿದೆ.ಅದರಲ್ಲಿಯೂ ರಾಜ್ ಕುಟುಂಬಕ್ಕೆ ಮತ್ತೊಮ್ಮೆ ಈ ಪ್ರಶಸ್ತಿ ಬಂದಿದೆ.

ನಾಡಿನ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಮೂಲಕ ಅವರ ಹೆಸರನ್ನು ಮತ್ತಷ್ಟು ಚಿರಸ್ಥಾಯಿಯಾಗಿ ಉಳಿಸುವ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದರು.

ಪುನೀತ್ ಸ್ಮಾರಕ:

ಇದೇ ಸಂದರ್ಭದಲ್ಲಿ ಡಾ. ರಾಜಕುಮಾರ್ ಸ್ಮಾರಕದಂತೆ ಪುನೀತ್ ರಾಜಕುಮಾರ್ ಅವರ ಸ್ಮಾರಕ ನಿರ್ಮಾಣ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಪುನೀತ್ ರಾಜಕುಮಾರ್ ಅವರ ಹೆಸರನ್ನು ಮತ್ತಷ್ಟು ಜನಪ್ರಿಯಗೊಳಿಸುವುದು ಕಾರ್ಯಕ್ರಮಗಳನ್ನು ಜಾರಿಗೆ ತರುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಪುನೀತ್ ರಾಜ್ ಕುಮಾರ್ ಅವರಿಗೆ ಎಷ್ಡಯ ಪ್ರಶಸ್ತಿ ಕೊಟ್ಟರೂ ಕಡಿಮೆ. ಅವರ ಸಾಮಾಜಿಕ ಕೆಲಸ, ಮಾನವೀಯ ಗುಣದ ಮುಂದೆ ಎಲವೂ ಚಿಕ್ಕದು ಎಂದರು.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾತನಾಡಿ, ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದು ಅತ್ಯಂತ ಸೂಕ್ತ ಮತ್ತು ಸಮಂಜಸ ಎಂದು ಹೇಳಿದರು.

ರಾಜಕುಮಾರ್ ಅವರೊಂದಿಗೆ ಕುಟುಂಬದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವುದಾಗಿ ನೆನಪು ಮಾಡಿಕೊಂಡ ಅವರು ಸಾರ್ವಜನಿಕರಿಗೆ ಅಭಿಮಾನಿಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಗದಿರುವುದು ನೋವಿನ ಸಂಗತಿ ಇದೀಗ ಮತ್ತೊಮ್ಮೆ ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡುವುದಾಗಿ ಈಗಾಗಲೇ ಹೇಳಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಡಾ. ರಾಜಕುಮಾರ್ ಅವರ ಕುಟುಂಬದ ಜೊತೆ ಮೊದಲಿನಿಂದಲೂ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಪುನೀತ್ ರಾಜಕುಮಾರ್ ಅವರ ಅಗಲಿಕೆಯ ನೋವು ತಂದಿದೆ. ಜೊತೆಗೆ ಇಡೀ ನಾಡು ಅವರ ಸಾವಿಗೆ ಕಂಬನಿ ಮಿಡಿದಿದೆ ಎಂದರು.

ಚಿಕ್ಕ ವಯಸ್ಸಿಲ್ಲಿ ಪುನೀತ್ ರಾಜ್ ಕುಮಾರ್ ನಿಧನರಾಗುತ್ತಾರೆ ಎಂದು ಭಾವಿಸಿರಲಿಲ್ಲ. ಅವರ ಸಾವು ನೋವು ತಂದಿದೆ‌. ಪುನೀತ್ ರಾಜಕುಮಾರ್ ನಿಧಾನರಾಗಿದ್ದ ಸಮಯದಲ್ಲಿ ನಾಡಿನ ಜನ ತಮ್ಮ ಮನೆಯಲ್ಲಿ ಸದಸ್ಯರನ್ನು ನಡೆದುಕೊಂಡ ರೀತಿ ನೋವು ತೋಡಿಕೊಂಡಿದ್ದಾರೆ ಎಂದು ಹೇಳಿದರು.

ಕನ್ನಡ ಜನರ ಹೃದಯ ಸಿಂಹಾಸನದಲ್ಲಿ ಪುನೀತ್ ರಾಜಕುಮಾರ್ ಗುರುತಿಸಿಕೊಂಡಿದ್ದರು. ನಟನಾಗಿ ಅಷ್ಡೇ ಅಲ್ಲದೆ ಸಾಮಾಜಿಕ ಕೆಲಸಗಾರನಾಗಿ, ನಯ ವಿನಯ, ಮಾನವೀಯ ಮೌಲ್ಯ ಮೈಗೂಡಿಸಿಕೊಂಡಿದ್ದ ಒಬ್ಬ ಅಪರೂಪದ ವ್ಯಕ್ತಿ ಹೀಗಾಗಿಯೇ ಕನ್ನಡ ನಾಡಿನ ಎಲ್ಲ ಜನರ ಹೃದಯದಲ್ಲಿ ಸಾಧ್ಯವಾಯಿತು ಎಂದು ಹೇಳಿದರು.

ಸಿನಿಮಾರಂಗದ ನಟ-ನಟಿಯರು ಸಚಿವರು ಪಾಲ್ಗೊಂಡಿದ್ದರು.