
ಕನಕಪುರ, ಮಾ.೧೯- ಚಿತ್ರನಟ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಕಟ್ಟಾ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಾಯಕ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬವನ್ನು ಸಾರ್ವಜನಿಕವಾಗಿ ವಿಜೃಂಭಣೆಯಿಂದ ಆಚರಿಸಿದರು.
ಕನಕಪುರ ತಾಲ್ಲೂಕಿನ ಕಸಬಾ ಹೋಬಳಿ ತುಂಗಣಿ ಗ್ರಾಮದ ಆಶಾ ಮತ್ತು ಶೇಖರ್ ಕುಟುಂಬ ಪುನೀತ್ ಹುಟ್ಟುಹಬ್ಬ ಆಚರಣೆ ಮಾಡಿದ ಕುಟುಂಬವಾಗಿದ್ದು ಹುಟ್ಟುಹಬ್ಬ ಆಚರಣೆ ಮಾಡಿ ಇಡೀ ಗ್ರಾಮಕ್ಕೆ ಭರ್ಜರಿ ಬಾಡೂಟ ಹಾಕಿಸಿದರು.
ಆಶಾ ಶೇಖರ್ ಕುಟುಂಬದವರು ಪುನೀತ್ ಅವರ ದೊಡ್ಡದಾದ ಭಾವಚಿತ್ರದ ಪೋಟೋವನ್ನು ಇಟ್ಟು ಗ್ರಾಮದಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿದರು. ಇದಕ್ಕೆ ಗ್ರಾಮದ ಜನತೆ ಕೈಜೋಡಿಸಿ ಆಚರಣೆಯಲ್ಲಿ ಪಾಲ್ಗೊಂಡು ಸಾಥ್ ನೀಡಿದರು.
ಗ್ರಾಮದ ಪುಟಾಣಿ ಮಕ್ಕಳೆಲ್ಲಾ ಸೇರಿ ಕೇಕ್ ಕತ್ತರಿಸಿದರು. ಕೇಕ್‌ನ್ನು ಗ್ರಾಮದ ಜನತೆಗೆ ಮೊದಲಿಗೆ ಹಂಚಿಕೆ ಮಾಡಿ ನಂತರದಲ್ಲಿ ಇಡೀ ಗ್ರಾಮದ ಜನತೆಗೆ ಊಟದ ವ್ಯವಸ್ಥೆಯನ್ನು ಮಾಡಿದ್ದು, ಗ್ರಾಮದ ಜನತೆ ಸಹಪಂಕ್ತಿಯಲ್ಲಿ ಕುಳಿತು ಭೋಜನಾ ಸವಿದರು.
ಈ ವೇಳೆಯಲ್ಲಿ ಆಶಾ ಶೇಖರ್ ಕುಟುಂಬದವರು ಮಾತನಾಡಿ ಪುನೀತ್ ರಾಜಕುಮಾರ್ ನಿಜವಾಗಿಯು ರಾಜರ ಮನೆಯಂತ ದೊಡ್ಡ ಕುಟುಂಬದವಲ್ಲಿ ಜನಿಸಿದ್ದರೂ ಹೋಗುವಾಗ ಏನೂ ತೆಗೆದುಕೊಂಡು ಹೋಗುವುದಿಲ್ಲ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.
ನಾವು ಮಾಡಿದ ದಾನ ಧರ್ಮವನ್ನು ಮಾತ್ರ ತೆಗೆದುಕೊಂಡು ಹೋಗುತ್ತೇವೆ ಎಂಬ ಸತ್ಯವನ್ನು ಜಗತ್ತಿಗೆ ತಿಳಿಸಿ ಹೋಗಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶವನ್ನು ಕೊಟ್ಟಿದ್ದಾರೆ ಎಂದರು.
ನಾವು ಮಾಡುವ ಸಂಪಾದನೆಯಲ್ಲಿ ಸಮಾಜಕ್ಕೆ ಒಂದಿಷ್ಟು ಬಳಕೆ ಮಾಡಬೇಕು, ನಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕು, ಬಡವರ ಸೇವೆ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಅವರ ಅಭಿಮಾನಿಯಾಗಿ ನಾವು ಅದೇ ದಾರಿಯಲ್ಲಿ ಸಾಗಬೇಕೆಂದು ತೀರ್ಮಾನಿಸಿದ್ದೇವೆ, ಪುನೀತ್ ರಾಜಕುಮಾರ್ ನಮಗೆಲ್ಲಾ ಒಂದು ಪಾಠ, ಜೀವನದ ಕಹಿ ಸತ್ಯವನ್ನು ನಮಗೆ ಅರ್ಥ ಮಾಡಿಸಿದ್ದಾರೆ ಎಂದು ತಿಳಿಸಿದರು.
ನಾವು ಅವರ ಅಭಿಮಾನಿಯಾಗಿ ಅವರ ಹುಟ್ಟು ಹಬ್ಬ ಮತ್ತು ಪುಣ್ಯಸ್ಮರಣೆ ಎರಡನ್ನು ಸಾರ್ವಜನಿಕವಾಗಿ ಮಾಡುತ್ತಿದ್ದೇವೆ, ನಾವು ಇರುವ ತನಕ ಈ ಸೇವೆಯನ್ನು ಮಾಡುತ್ತಾ ಅವರ ಹೆಸರಿನಲ್ಲಿ ಅನ್ನದಾಸೋಹವನ್ನು ನಡೆಸುತ್ತೇವೆ ಎಂದು ಹೇಳಿದರು.
ತುಂಗಣಿ ಗ್ರಾಮದ ಎಲ್ಲಾ ಮುಖಂಡರು ಆಚರಣೆಯಲ್ಲಿ ಪಾಲ್ಗೊಂಡಿದ್ದರು.