ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.03: ನಗುವಿನ ಒಡೆಯ, ಪವರ್‍ಸ್ಟಾರ್ ದಿ.ಡಾ.ಪುನೀತ್‍ರಾಜ್‍ಕುಮಾರ್‍ರವರ ಕಂಚಿನ ಪುತ್ಥಳಿಯನ್ನು ಅವರ ಧರ್ಮಪತ್ನಿ ಅಶ್ವಿನಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಲೋಕಾರ್ಪಣೆಗೊಳಿಸಿದರು.
ಅಶ್ವಿನಿಪುನೀತ್‍ರಾಜ್‍ಕುಮಾರ್‍ರವರನ್ನು ಪಟ್ಟಣದ ಪ್ರವಾಸಿಮಂದಿರದಿಂದ ಮೆರವಣಿಗೆಯ ಮೂಲಕ ಟಿಬಿ ಸರ್ಕಲ್‍ನಲ್ಲಿ ಪುನೀತ್ ಯುವಸಾಮ್ರಾಜ್ಯದ ವತಿಯಿಂದ ನಿರ್ಮಿಸಲಾಗಿದ್ದ ಪ್ರತಿಮೆಯ ಅನಾವರಣ ಸ್ಥಳಕ್ಕೆ ಕರೆತರಲಾಯಿತು. ಅಭಿಮಾನಿಗಳು ಅಶ್ವಿನಿಯವರಿಗೆ ಹೂಮಳೆಗೆರೆದರು. ದಿ.ಪುನೀತ್ ರಾಜ್‍ಕುಮಾರ್ ರವರ ಕಂಚಿನ ಪುತ್ಥಳಿಯನ್ನು ಉಧ್ಘಾಟಿಸಿದ ಅವರು ಅತ್ಯುತ್ತಮವಾಗಿ ನಿರ್ಮಿಸಿದ್ದ ಪ್ರತಿಮೆಯನ್ನು ನೋಡಿ ಮನಸೋತರು. ನಂತರ ಅವರ ಕಣ್ಣುಗಳ ಅಂಚಿನಲ್ಲಿ ಆನಂದಬಾಷ್ಪಗಳು ಮೂಡಿದವು. ನಂತರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಅಭಿಮಾನಿಗಳ ಪ್ರೀತಿ, ವಿಶ್ವಾಸಕ್ಕೆ ಮಾರುಹೋದರು. ಈ ವೇಳೆ ನೆರೆದಿದ್ದ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಅಪ್ಪು, ಅಪ್ಪು ಎಂದು ಘೋಷಣೆಗಳನ್ನು ಕೂಗಿ ಪಟಾಕಿ ಸಿಡಿಸಿ, ಶಿಳ್ಳೆ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಕನ್ನಡ ನಾಡು ಕಂಡ ಹೃದಯಶ್ರೀಮಂತಿಕೆಯ ಅಪರೂಪದ ವ್ಯಕ್ತಿತ್ವದ ಪುನೀತ್ ರಾಜ್‍ಕುಮಾರ್ ಅಗಲಿಕೆಯ ನೋವು ಇಡೀ ಕನ್ನಡ ಚಿತ್ರರಂಗವಲ್ಲದೇ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಬದುಕಿದ್ದಾಗ ಸಾರ್ಥಕ ಜೀವನ ನಡೆಸುವ ಮೂಲಕ ಸಾವಿರಾರು ಮಕ್ಕಳಿಗೆ, ವೃದ್ದರಿಗೆ, ಅನಾಥರಿಗೆ ದಾರಿದೀಪವಾಗಿದ್ದರು. ಸರಳತೆಯನ್ನು ಮೈಗೂಡಿಸಿಕೊಂಡಿದ್ದ ಅವರಿಗೆ ತಂದೆ ಡಾ.ರಾಜ್‍ಕುಮಾರ್ ರವರಿಂದ ಹಲವಾರು ಉತ್ತಮ ಗುಣಗಳು ಬಂದಿದ್ದವು ಎಷ್ಟೇ ವರ್ಷ ಕಳೆದರೂ ಅಪ್ಪು ಕನ್ನಡಿಗರ ಮನೆ, ಮನಸ್ಸಿನಿಂದ ದೂರವಾಗುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್. ಕಿರುತೆರೆ ಹಾಸ್ಯಕಲಾವಿದ ಕಾಮಿಡಿಕಿಲಾಡಿಗಳು ಖ್ಯಾತಿಯ ಶಿವರಾಜ್, ಜಯಕರ್ನಾಟಕ ಸಂಘಟನೆಯ ರಾಜ್ಯಾದ್ಯಕ್ಷ ಜಗದೀಶ್, ಜಿಲ್ಲಾದ್ಯಕ್ಷ ಯೋಗಣ್ಣ, ಕಾಂಗ್ರೆಸ್ ಮುಖಂಡ ವಿಜಯ್‍ರಾಮೇಗೌಡ, ಜಯಕರ್ನಾಟಕ ಸಂಘಟನೆಯ ಯುವ ಘಟಕದ ಅಧ್ಯಕ್ಷ ಕೆ.ಎಲ್.ಮಹೇಶ್. ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘದ ಹರೀಶ್, ಬೇಕರಿಹರೀಶ್, ಯೋಗೇಶ್, ದಿಲೀಪ್, ರಾಘು, ಪ್ರವೀಣ್, ಲೋಹಿತ್, ಎಂ.ಸಿ.ಜಗ, ದೇವರಾಜು, ಮಂಜು, ದಿನೆಶ್, ಹರ್ಷ, ಸತೀಶ್ ಸೇರಿದಂತೆ ಸಾವಿರಾರು ಅಭಿಮಾನಿಗಳು ಹಾಜರಿದ್ದರು.