ಪುನೀತ್ ಮೇಲಿನ ಅಭಿಮಾನ ಬಳ್ಳಾರಿ-ಬೆಂಗಳೂರು ಮಹಿಳೆ ಓಟ

ಬೆಂಗಳೂರು.ನ೩೦:ಪುನೀತ್ ಅಂದರೆ ಪಂಚಪ್ರಾಣ -ಅದಕ್ಕಾಗಿ ಧಾರವಾಡದ ಈ ಮಹಿಳೆ ಅಪ್ಪು ಸಮಾಧಿವರೆಗೆ ಓಡಿಕೊಂಡು ಬರುತ್ತಿದ್ದಾರೆ
ದಾರಿ ಮಧ್ಯೆ ಎಲ್ಲಿ ಅನುಕೂಲ ಸಿಗುತ್ತದೆಯೋ ಅಲ್ಲಿಯೇ ಉಳಿದುಕೊಂಡು ಮತ್ತೆ ಹಗಲು ಹೊತ್ತಿನಲ್ಲಿ ಪ್ರಯಾಣ ಶುರು ಮಾಡಲಾಗುತ್ತದೆ. ಇನ್ನು ವಾಹನದಲ್ಲಿ ಅವಶ್ಯಕ ವಸ್ತುಗಳನ್ನು ತೆಗೆದುಕೊಳ್ಳಲಾಗಿದೆ. ಮಧ್ಯಾಹ್ನ ಹಾಗೂ ರಾತ್ರಿ ಹೊತ್ತಿನಲ್ಲಿ ಅಡುಗೆ ಮಾಡಿಕೊಂಡು, ಊಟ ಮಾಡಿ ಮತ್ತೆ ಪ್ರಯಾಣ ಮುಂದುವರೆಸಲಿರುವ ದಾಕ್ಷಾಯಿಣಿ, ೧೩ ದಿನಕ್ಕೆ ಬೆಂಗಳೂರು ತಲುಪಲಿದ್ದಾರೆ. ಈ ವೇಳೆ ಅಪ್ಪು ಕುಟುಂಬಸ್ಥರನ್ನು ಭೇಟಿಯಾಗೋ ಇಚ್ಛೆ ಕೂಡ ಈ ಕುಟುಂಬಕ್ಕೆ ಇದೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ ನಿಧನರಾಗಿ ಒಂದು ತಿಂಗಳು ಕಳೆದಿದೆ. ಒಂದು ತಿಂಗಳು ಕಳೆದರೂ ಇನ್ನೂ ಕೂಡ ಎಲ್ಲರ ಮನದಲ್ಲಿ ಅವರನ್ನು ಕಳೆದುಕೊಂಡ ನೋವು ಕೊಂಚವೂ ಕಡಿಮೆಯಾಗಿಲ್ಲ. ಅವರ ಸಮಾಜ ಸೇವಾ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾ ಅವರ ಅಭಿಮಾನಿಗಳು ತಾವು ಕೂಡ ಅಂಥದ್ದೇ ಕೆಲಸ ಮಾಡುತ್ತಿದ್ದಾರೆ. ಧಾರವಾಡದ ಕುಟುಂಬವೊಂದು ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾಗಿದ್ದು, ಅವರನ್ನು ಕಣ್ಣಾರೆ ನೋಡಬೇಕೆಂದುಕೊಂಡಿತ್ತು. ಆದರೆ ಅದು ಕೊನೆಯವರೆಗೂ ಸಾಧ್ಯವಾಗಿರಲೇ ಇಲ್ಲ. ಇದೇ ಕಾರಣಕ್ಕೆ ಇದೀಗ ಆ ಕುಟುಂಬದ ಮಹಿಳೆಯೊಬ್ಬರು ಪುನೀತ್ ಸಮಾಧಿಗೆ ಹೋಗಿ, ಶ್ರದ್ಧಾಂಜಲಿ ಸಲ್ಲಿಸಲು ನಿರ್ಧರಿಸಿದ್ದಾರೆ. ಇದರಲ್ಲಿ ಏನು ವಿಶೇಷ ಅನ್ನೋದನ್ನು ಕೇಳಿದರೆ ಎಂಥವರೂ ಅಚ್ಚರಿಪಡುತ್ತಾರೆ.
ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ಉಮೇಶ ಪಾಟೀಲ್ ಕುಟುಂಬದವರಿಗೆ ಅಪ್ಪು ಅಂದರೆ ಪಂಚಪ್ರಾಣ. ಅವರ ಪತ್ನಿ ದಾಕ್ಷಾಯಿಣಿ ಪಾಟೀಲ್ ಅವರಿಗಂತೂ ಅಪ್ಪು ಅಂದರೆ ದೇವರ ಸಮಾನ. ಅಷ್ಟಕ್ಕೂ ಅಪ್ಪುನನ್ನು ದಾಕ್ಷಾಯಿಣಿ ಇಷ್ಟ ಪಡೋದಕ್ಕೆ ಕಾರಣ ಅಪ್ಪು ಫಿಟ್ ಅಂಡ್ ಫೈನ್ ಆಗಿದ್ದು. ದಾಕ್ಷಾಯಿಣಿ ಹೈಸ್ಕೂಲು, ಕಾಲೇಜು ದಿನಗಳಲ್ಲಿ ಒಳ್ಳೆಯ ಓಟಗಾರ್ತಿ. ವಿದ್ಯಾರ್ಥಿನಿಯಾಗಿದ್ದಾಗ ಅನೇಕ ಬಹುಮಾನಗಳನ್ನು ಕೂಡ ಪಡೆದುಕೊಂಡವರು. ಆದರೆ ಬಳಿಕ ಮದುವೆಯಾಗಿ ಸಂಸಾರದ ಜಂಜಡದಲ್ಲಿ ಬಿದ್ದುಬಿಟ್ಟರು. ೩೦ ವರ್ಷದ ದಾಕ್ಷಾಯಿಣಿ ಅಪ್ಪು ಅವರ ಎಲ್ಲ ಸಿನಿಮಾಗಳನ್ನು ತಪ್ಪದೇ ನೋಡುತ್ತಿದ್ದರು. ಇದೀಗ ದಾಕ್ಷಾಯಿಣಿ ಮೂರು ಮಕ್ಕಳ ತಾಯಿ. ಇಂಥ ಮಹಿಳೆ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮ ಮನಗುಂಡಿ ಗ್ರಾಮದಿಂದ ಬೆಂಗಳೂರಿನಲ್ಲಿನ ಪುನಿತ್ ಸಮಾಧಿವರೆಗೆ ಓಡುತ್ತಲೇ ಹೋಗಲಿರೋ ದಾಕ್ಷಾಯಿಣಿ, ಆ ಮೂಲಕ ತನ್ನ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಇದೀಗ ಓಟವನ್ನು ಆರಂಭಿಸಿರೋ ದಾಕ್ಷಾಯಿಣಿ ಒಟ್ಟು ೧೩ ದಿನಗಳಲ್ಲಿ ಬೆಂಗಳೂರು ತಲುಪಲಿದ್ದಾರೆ.