`ಪುನೀತ್ ನೆನಪು’ ಕಾರ್ಯಕ್ರಮ ಆಯೋಜಿಸಲು ಆಗ್ರಹ


ಹುಬ್ಬಳ್ಳಿ, ನ 20: ರಾಜ್ಯ ಸರ್ಕಾರ ದಿ. ಪುನೀತ್ ರಾಜ್‍ಕುಮಾರ್ ಅವರಿಗೆ ನುಡಿನಮನ ಸಲ್ಲಿಸಲು ಹುಬ್ಬಳ್ಳಿಯಲ್ಲಿ “ಪುನೀತ್ ನೆನಪು” ಕಾರ್ಯಕ್ರಮ ಆಯೋಜಿಸಬೇಕೆಂದು ಡಾ.ರಾಜಕುಮಾರ ಅಭಿಮಾನಿಗಳ ಸಂಘದ ಮುಖ್ಯಸ್ಥ ಶಿವಾನಂದ ಮುತ್ತಣ್ಣವರ ಒತ್ತಾಯಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ದಿ. ಪುನೀತ್ ರಾಜಕುಮಾರ ಅವರಿಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನುಡಿ ನಮನ ಸಲ್ಲಿಸಿದ್ದು, ಅದರಂತೆ ಹುಬ್ಬಳ್ಳಿಯಲ್ಲಿ ಕನಿಷ್ಠ 3 ಲಕ್ಷ ಅಭಿಮಾನಿಗಳ ಸಮ್ಮುಖದಲ್ಲಿ ಪುನೀತ್ ನೆನಪು ಕಾರ್ಯಕ್ರಮವನ್ನು ಸರ್ಕಾರ ಡಿಸೆಂಬರ್ ಅಂತ್ಯದೊಳಗೆ ಆಯೋಜಿಸಬೇಕು. ಇಲ್ಲವಾದರೆ ಸಿಎಂ ನಿವಾಸದ ಎದುರು ಧರಣಿ ನಡೆಸಲಾಗುವುದು ಎಂದರು.
ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೊಡಲು ತೀರ್ಮಾನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಉತ್ತರ ಕರ್ನಾಟಕ ಹಾಗೂ ಹುಬ್ಬಳ್ಳಿಯ ಸಮಸ್ತ ಪುನೀತ್ ಅಭಿಮಾನಿಗಳ ವತಿಯಿಂದ ಧನ್ಯವಾದ ತಿಳಿಸುವೆ ಎಂದರು.