ಪುನೀತ್ ನಿವಾಸಕ್ಕೆ ನಟ ವಿಶಾಲ್ ಭೇಟಿ

ಬೆಂಗಳೂರು,ನ.೧೭- ಅಗಲಿದ ನಟ ಪುನೀತ್ ರಾಜಕುಮಾರ್ ಅವರ ನಿವಾಸಕ್ಕೆ ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಹಿರಿಯ ಚಿತ್ರನಟ ಶಿವರಾಜ್ ಕುಮಾರ್ ಅವರ ಜೊತೆ ಸದಾಶಿವನಗರದ ನಿವಾಸಕ್ಕೆ ಆಗಮಿಸಿದ ನಟ ವಿಶಾಲ್ ಅವರು ಪುನೀತ್ ಪತ್ನಿ ಅಶ್ವಿನಿ ಸೇರಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ನಟ ಪುನೀತ್ ರಾಜಕುಮಾರ್ ಅವರು ನಡೆಸುತ್ತಿದ್ದ ಸಾವಿರದ ಎಂಟು ನೂರು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ತಾನು ವಹಿಸಿಕೊಳ್ಳುವುದಾಗಿ ನಟ ವಿಶಾಲ್ ಈಗಾಗಲೇ ಘೋಷಣೆ ಮಾಡಿದ್ದು ಈ ಸಂಬಂಧ ಕೂಡ ಪುನೀತ್ ಅವರ ಪತ್ನಿ ಅಶ್ವಿನಿ ಅವರ ಜೊತೆ ಚರ್ಚೆ ನಡೆಸಿದ್ದಾರೆ.
ಪುನೀತ್ ರಾಜಕುಮಾರ್ ಅವರು ಮಾಡಿರುವ ಒಳ್ಳೆಯ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಇದರಲ್ಲಿ ಭಾಗಿಯಾಗಲು ತಮಗೂ ಕೂಡ ಅವಕಾಶ ಮಾಡಿಕೊಡಿ ಎಂದು ಅವರು ಕುಟುಂಬದ ಸದಸ್ಯರಿಗೆ ಮನವಿ ಮಾಡಿದ್ದಾರೆ.
ಪುನೀತ್ ರಾಜಕುಮಾರ್ ಅವರ ನಿಧನದಿಂದ ತೀವ್ರ ಆಘಾತಕ್ಕೆ ಒಳಗಾಗಿರುವ ನಟ ವಿಶಾಲ್ ಅವರು ದುಃಖದಿಂದ ಹೊರಬರಲು ಸಾಕಷ್ಟು ಸಮಯ ಬೇಕಾಯಿತು ಎಂದು ಹೇಳಿದ್ದಾರೆ.
ಪುನೀತ್ ರಾಜಕುಮಾರ್ ಅವರು ಮಾಡಿರುವ ಸಾಮಾಜಿಕ ಕೆಲಸ ಕಾರ್ಯಗಳ ಮೂಲಕ ಅವರನ್ನು ಸದಾ ಜೀವಂತವಾಗಿರುವ ಕೆಲಸ ಮಾಡಬೇಕಾಗಿದೆ. ಇದರಲ್ಲಿ ತಾವು ಕೂಡ ಅಳಿಲು ಸೇವೆ ಸಲ್ಲಿಸುತ್ತಿರುವುದು ಖುಷಿ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.