ಪುನೀತ್ ನಮನ, ಕಲಾವಿದರ ಕಣ್ಣೀರು

ಬೆಂಗಳೂರು, ನ.೧೬- ಕನ್ನಡ ಚಿತ್ರರಂಗದಲ್ಲಿ ಸರಳ ಸಜ್ಜನಿಕೆ ಮೂಲಕ ಹೆಸರು ಮತ್ತು ಖ್ಯಾತಿ ಪಡೆದಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಇಂದು ಮಧ್ಯಾಹ್ನ “ಪುನೀತ್ ನಮನ” ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ.
ನಗರದ ಅರಮನೆ ಮೈದಾನದಲ್ಲಿ ಮಧ್ಯಾಹ್ನ ೩ ಗಂಟೆಯಿಂದ ಸಂಜೆ ೬ ಗಂಟೆ ತನಕ ನಡೆಯಲಿರುವ ಪುನೀತ್ ನಮನ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಘಟಾನುಘಟಿ ನಾಯಕರು ತಂತ್ರಜ್ಞರು ಕಲಾವಿದರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ನಮನ ಕಾರ್ಯಕ್ರಮದಲ್ಲಿ ಸರಿಸುಮಾರು ಎರಡು ಸಾವಿರ ಮಂದಿ ಗಣ್ಯರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಪುನೀತ್ ನಮನ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗೆ ಯಾವುದೇ ತೊಂದರೆಯಾಗಬಾರದು ಎನ್ನುವ ಕಾರಣಕ್ಕಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಪಾಸ್ ವ್ಯವಸ್ಥೆ ಮಾಡಿದೆ. ಕಾರ್ಯಕ್ರಮಕ್ಕೆ ಪಾಸ್ ಇದ್ದವರಿಗೆ ಅಷ್ಟೇ ಅವಕಾಶ ಮಾಡಿಕೊಡಲಾಗುತ್ತಿದೆ.
ಕನ್ನಡ ಚಿತ್ರರಂಗದ ಖ್ಯಾತ ನಟ ನಟಿಯರು ಕಲಾವಿದರು ತಂತ್ರಜ್ಞರು ಭಾಗವಹಿಸಲಿದ್ದಾರೆ ಇದರ ಜೊತೆಗೆ ತೆಲುಗು ತಮಿಳು ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳ ಚಿತ್ರರಂಗದವರನ್ನು ಆಹ್ವಾನಿಸಲಾಗಿದೆ ಹೀಗಾಗಿ ಗೊಂದಲ ಗೋಜಲುಗಳಿಗೆ ಅವಕಾಶ ಮಾಡಿಕೊಡದೆ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಲು ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ರಾಜಕೀಯ ನಾಯಕರು ಭಾಗಿ:
ಪುನೀತ್ ನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ನಾಯಕರು ಕೂಡ ಪಾಲ್ಗೊಂಡು ಅಗಲಿದರು ನಟನೆಗೆ ನಮನ ಸಲ್ಲಿಸಿದ್ದಾರೆ.
ಪುನೀತ್ ನಮನ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ನಡೆದುಬಂದ ದಾರಿಯ ಅನಾವರಣ ಮಾಡುವ ಜೊತೆಗೆ ಅವರ ಚಿತ್ರಗಳ ಹಾಡುಗಳ ಪ್ರದರ್ಶನ ಜೊತೆಗೆ ಪುನೀತ್ ಅವರನ್ನು ಹತ್ತಿರದಿಂದ ಬಲ್ಲವರು ಅವರ ಬಗ್ಗೆ ಗುಣಗಾನ ಮಾಡಲಿದ್ದಾರೆ.
ಪುನೀತ್ ನಮನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದ ಅರಮನೆ ಮೈದಾನದಲ್ಲಿ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಾರ್ವಜನಿಕರ ಕಾರ್ಯಕ್ರಮ ವೀಕ್ಷಣೆಗೆ ದೊಡ್ಡ ಪರದೆ ಹಾಕಲಾಗಿದೆ.
ಸಿನಿಮಾ ರಾಜಕೀಯ ನಾಯಕರು ಮತ್ತು ಗಣ್ಯರ ಜೊತೆ ಜೊತೆ ರಾಜಕುಮಾರ್ ಕುಟುಂಬದ ಸದಸ್ಯರು ಕೂಡ ಪಾಲ್ಗೊಳ್ಳಲಿದ್ದಾರೆ.