ಪುನರ್ವಸತಿ ಕಲ್ಪಿಸಲು ವಿವಿಧ ಇಲಾಖಾ ಅಧಿಕಾರಿಗಳಿಂದ ಸರ್ವೇಕಾರ್ಯ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.28- ಮೆಂದರೆ ಹಾಡಿಯ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಸರ್ವೇ ಕಾರ್ಯ ಆರಂಭಿಸಿದ್ದಾರೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಗ್ರಾ.ಪಂ ವ್ಯಾಪ್ತಿಯ ಮೆಂದಾರೆ ಬುಡಕಟ್ಟು ಸೋಲಿಗ ಸಮುದಾಯದ ಒತ್ತಾಯದ ಹಿನ್ನೆಲೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಆದೇಶದಂತೆ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಗ್ರಾಮದಲ್ಲಿ ಇಂದು ಮನೆ ಮನೆಗೆ ಭೇಟಿ ನೀಡಿ ಸಮಗ್ರ ಮಾಹಿತಿಯೊಂದಿಗೆ ಸಮೀಕ್ಷೆ ನಡೆಸುತ್ತಿದ್ದಾರೆ.
ಏಪ್ರಿಲ್ 26ರಂದು ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆದ್ವಂಸ ಪ್ರಕರಣ ಹಾಗೂ ಮೆಂದರೆ ನಿವಾಸಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆಯಿಂದ ಭಯಭೀತರಾಗಿ ತಮಗೆ ಬೇರೆ ಸ್ಥಳದಲ್ಲಿ ಪುನರ್ವಸತಿ ಕಲ್ಪಿಸಿಕೊಡಿ ಎಂದು ಒತ್ತಾಯಿಸಿದ್ದರು. ಸೋಲಿಗರ ಒತ್ತಾಯದ ಮೇರೆಗೆ ಅಧಿಕಾರಿಗಳ ತಂಡ ಹಿರಿಯ ಅಧಿಕಾರಿಗಳ ಮಾರ್ಗ ದರ್ಶನದಲ್ಲಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದು ವರದಿ ತಯಾರಿಸುತ್ತಿದ್ದಾರೆ.
ಎಸಿ ಅಧ್ಯಕ್ಷತೆಯಲ್ಲಿ ಸಮಿತಿ: ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಶಿವಮೂರ್ತಿ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ. ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಶಿವಕುಮಾರ್ ಗ್ರಾಮಲೆಕ್ಕಿಗ ವಿನೋದ್ ಕುಮಾರ್ ಅರಣ್ಯ ಇಲಾಖೆ ಉಪವಲಯ ಅರಣ್ಯ ಅಧಿಕಾರಿ ಶಿವರಾಜ, ಅರಣ್ಯ ರಕ್ಷಕ ಸಂಗಪ್ಪ, ಪಿಡಿಒ ಕಿರಣ್‍ಕುಮಾರ್ ದ್ವಿತೀಯ ದರ್ಜೆ ಸಹಾಯಕ ಸತೀಶ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆ ಶಿಕ್ಷಕ ಚೆಲುವರಾಜ್, ಹೊರಗುತ್ತಿಗೆ ಶಿಕ್ಷಕ ಸುಧಾಕರ, ಭೂಮಾಪನ ಇಲಾಖೆಯ ಭೂಮಾಪಕ ಶ್ರೀನಿವಾಸ್ ಮೂರ್ತಿ ವೀರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿ ಕಾರ್ಯಕರ್ತೆ ಮಾದೇವಿ ಅವರನ್ನು ಒಳಗೊಂಡಂತೆ ಮೆಂದರೆ ಗ್ರಾಮದ ಸರ್ವೆ ನಡೆಸಲು ಸಮಿತಿ ರಚಿಸಲಾಗಿದೆ.
ಸರ್ವೇಕಾರ್ಯ ಹೇಗೆ: ಮನೆ ಮನೆ ಭೇಟಿ ನೀಡುವ ಅಧಿಕಾರಿಗಳ ಮನೆಯ ಯಜಮಾನನಿಂದ ಮಾಹಿತಿ ಪಡೆಯಲಿದ್ದಾರೆ. ಸಂಗ್ರಹಿಸಿದ ಮಾಹಿತಿಯನ್ನು ಮರು ಮೌಲ್ಯಮಾಪನ ಮಾಡಲು ಭೂ ದಾಖಲೆಗಳು, ಆಧಾರ್ ಕಾರ್ಡ್ ಪ್ರತಿ, ಜಮೀನಿನ ದಾಖಲಾತಿಗಳು ಹಾಗೂ ಫೆÇೀಟೋ ಸಮೇತ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಿದ್ದಾರೆ.