ಪುತ್ರನ ಕೊಂದು ಆತ್ಮಹತ್ಯೆ ನಾಟಕವಾಡಿದ್ದ ತಂದೆ ಸೆರೆ

ಬೆಂಗಳೂರು,ಮಾ.೧೦- ಬಸವೇಶ್ವರ ನಗರದಲ್ಲಿ ನಡೆದ ಪದವಿ ವಿದ್ಯಾರ್ಥಿಯ ಶಂಕಾಸ್ಪದ ಸಾವು ಕೊಲೆ ಎನ್ನುವುದು ಪೊಲೀಸರ ತನಿಖೆಯಲ್ಲಿ ಸಾಬೀತಾಗಿದ್ದು, ಆತನ ತಂದೆಯೇ ಕೊಲೆ ಮಾಡಿ,ಆತ್ಮಹತ್ಯೆ ಎಂಬುದಾಗಿ ಬಿಂಬಿಸಿರುವುದು ಪತ್ತೆಯಾಗಿದೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲೂ ಆತ್ಮಹತ್ಯೆ ಅಲ್ಲ ಕೊಲೆ ಎಂಬುದಾಗಿ ಉಲ್ಲೇಖಿಸಿದ್ದು ಕೃತ್ಯ ನಡೆಸಿದ ತಂದೆಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಕಳೆದ ಮಾರ್ಚ್ ೬ರಂದು ಬಸವೇಶ್ವರ ನಗರದಲ್ಲಿ ಯೋಗೇಶ್ ಯುವಕನು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು,ಆತನ ತಂದೆ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಾಗಿ ನಾಟಕವಾಡಿದ್ದರು.
ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಯೋಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದೇ ಆತನ ತಂದೆ ಬಿಂಬಿಸಿದ್ದರು. ಆದರೆ, ಮಗನ ಕುಡಿತದ ಚಟ ಸಹಿಸಿಕೊಳ್ಳದೆ ಮಗನನ್ನೇ ಆತ ಕೊಲೆ ಮಾಡಿರುವುದು ಬಯಲಾಗಿದೆ.
ಪದವಿ ಓದುತ್ತಿದ್ದ ಯೋಗೇಶ್ ಕುಡಿತದ ದಾಸನಾಗಿದ್ದ. ಪ್ರತಿದಿನ ಆತ ಮದ್ಯಪಾನ ಮಾಡಿ ಮನೆಗೆ ಬರುತ್ತಿದ್ದ. ಇದರಿಂದ ಕುಪಿತಗೊಂಡ ಪ್ರಕಾಶ್, ಕುಡಿತ ಬಿಡು ಎಂದು ಗದರಿದ್ದರು. ಇದೇ ವಿಷಯಕ್ಕೆ ಮಾರ್ಚ್ ೬ರಂದು ತಂದೆ-ಮಗನ ಮಧ್ಯೆ ಗಲಾಟೆ ನಡೆದಿತ್ತು. ಇದೇ ವೇಳೆ ಕೋಪಗೊಂಡಿದ್ದ ಪ್ರಕಾಶ್, ಮಗನ ಕತ್ತು ಬಿಗಿದು ಕೊಲೆ ಮಾಡಿದ್ದರು. ಇದಾದ ಬಳಿಕ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಾಟಕವಾಡಿದ್ದರು.
ಪ್ರಕಾಶ್ ಹಾಗೂ ಯೋಗೇಶ್ ಮಧ್ಯೆ ನಡೆದ ಗಲಾಟೆ ಕುರಿತು ಅಕ್ಕಪಕ್ಕದ ಮನೆಯವರಿಗೆ ಗೊತ್ತಿತ್ತು.ಹಾಗಾಗಿ, ಯೋಗೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇಲ್ಲ ಎಂಬುದಾಗಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಗಲಾಟೆ ಕುರಿತು ಪೊಲೀಸರಿಗೆ ತಿಳಿಸಿದ್ದರು. ಮನೆ ಪರಿಶೀಲನೆ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪೊಲೀಸರಿಗೂ ಅನುಮಾನಗಳು ಇದ್ದವು. ಇದಾದ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ವರದಿಯಲ್ಲಿ ಆತ್ಮಹತ್ಯೆ ಅಲ್ಲ ಕೊಲೆ ಎಂದು ಉಲ್ಲೇಖಿಸಿದ ಕಾರಣ ಯೋಗೇಶ್ ತಂದೆಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.