ಪುತ್ರನಿಗೆ ದಸರ ಆನೆಗಳ ದರ್ಶನ ಮಾಡಿಸಿದ ರಾಜವಂಶಸ್ಥ ಯದುವೀರ್ ಒಡೆಯರ್

ಮೈಸೂರು,ಅ.28:- ಅ.1ರಂದು ಮೈಸೂರಿಗೆ ದಸರಾದಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿವಿಧ ಶಿಬಿರಗಳಿಂದ ಆಗಮಿಸಿದ ಗಜಪಡೆ ಇಂದು ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿವೆ.
ಇಂದು ಕಾಡಿಗೆ ಗಜಪಡೆಯ ಪಯಣದ ಹಿನ್ನೆಲೆಯಲ್ಲಿ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಸುಪುತ್ರ, ಯುವರಾಜ ಆದ್ಯವೀರ್ ಅವರಿಗೆ ಆನೆಯ ದರ್ಶನ ಮಾಡಿಸಿದರು. ಗಜಪಡೆಯ ನಾಯಕನಾಗಿದ್ದ ಅಭಿಮನ್ಯು ರಾಜವಂಶಸ್ಥ ಯದುವೀರ್ ಒಡೆಯರ್ ಮತ್ತು ಯುವರಾಜ ಆದ್ಯವೀರ್ ಒಡೆಯರ್ ಅವರಿಗೆ ಸೊಂಡಿಲನ್ನು ಮೇಲೆತ್ತಿ ನಮಸ್ಕರಿಸುವುದು ಕಂಡು ಬಂತು.
ಅರಮನೆಯ ಎದುರು ಗಜಪಡೆಯನ್ನು ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸುವ ಮೂಲಕ ಕಾಡಿಗೆ ಬೀಳ್ಕೊಡಲಾಯಿತು. ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಜಂಬೂ ಸವಾರಿಯನ್ನು ಅರಮನೆ ಆವರಣದೊಳಕ್ಕೆ ಮಾತ್ರ ಸೀಮಿತಗೊಳಿಸಲಾಗಿತ್ತು. ಅರಮನೆಯ ರಾಜವಂಶಸ್ಥರು ಕೂಡ ಅರಮನೆಯಲ್ಲಿಯೇ ಸಾಂಪ್ರದಾಯಿಕ ದಸರಾ ಆಚರಿಸಿದ್ದರು. ಸಾರ್ವಜನಿಕರಿಗೆ ಅರಮನೆಯೊಳಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಯುವರಾಜ ಆದ್ಯವೀರ್ ಅವರು ಈ ಬಾರಿ ಗಜಪಡೆಯನ್ನು ವೀಕ್ಷಿಸಿರಲಿಲ್ಲ.