ಪುತ್ಥಳಿ ಮರುಪ್ರತಿಷ್ಠಾಪನೆಗೆ ಆಗ್ರಹಿಸಿ ಪ್ರತಿಭಟನೆ

(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ,ಆ23: ಬಾಗಲಕೋಟೆಯಲ್ಲಿ ಇತ್ತೀಚಿಗೆ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಪುತ್ಥಳಿ ತೆರವುಗೊಳಿಸಿದ್ದನ್ನು ಖಂಡಿಸಿ ಹಾಗೂ ಅದೇ ಸ್ಥಳದಲ್ಲಿಯೇ ಮರುಪ್ರತಿಷ್ಠಾಪನೆ ಮಾಡಬೇಕೆಂದು ಆಗ್ರಹಿಸಿ ಮರಾಠಾ ಶ್ರೀ ಭಾರತಿ ಮಠ ಟ್ರಸ್ಟ್ ಸಮಿತಿ ವತಿಯಿಂದ ನಗರದ ಮಿನಿವಿಧಾನ ಸೌಧದ ಆವರಣದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ನಗರದ ತಾಲೂಕು ತಹಶಿಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬಳಿಕ, ಮರಾಠಾ ಶ್ರೀ ಭಾರತಿಮಠ ಅಧ್ಯಕ್ಷರಾದ ಸುನೀಲ್ ದಳವಿ ಮಾತನಾಡಿ, 16 ಅಡಿ ಎತ್ತರದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯು ತಯಾರಾಗಿದ್ದು, ಈ ಪುತ್ಥಳಿಯನ್ನು ಮೂರ್ತಿ ತೆರವುಗೊಳಿಸಿದ ಸ್ಥಳದಲ್ಲಿಯೇ ಮರು ಪ್ರತಿಷ್ಠಾಪನೆ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಪಡಿಸುತ್ತೇವೆಂದರು.
ಈ ಸಂದರ್ಭದಲ್ಲಿ ಮರಾಠಾ ಶ್ರೀ ಭಾರತಿಮಠದ ಕಾರ್ಯದರ್ಶಿ ನಾರಾಯಣ ವೈದ್ಯ, ವಿವಿಧ ದಲಿತಪರ ಸಂಘಟನೆಗಳ ಮುಖಂಡ ಗುರುನಾಥ ಉಳ್ಳಿಕಾಶಿ, ಶ್ರೀ ಭಾರತಿ ಮಠ ಟ್ರಸ್ಟ್ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.