ಪುತ್ಥಳಿ ಕುಸಿತ-ಸೂಕ್ತ ಕ್ರಮಕೈ ಆಗ್ರಹ

ಧಾರವಾಡ ಮಾ.25: ಹುಬ್ಬಳ್ಳಿಯಲ್ಲಿ ಇತ್ತೀಚಿಗೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಕುಸಿದಿರುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಮಸ್ತ ಮರಾಠಾ ಸಮಾಜ ಬಾಂಧವರು ದಿ. ಮರಾಠಾ ವಿದ್ಯಾಪ್ರಸಾರಕ ಮಂಡಳ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹು-ಧಾ ಮಹಾನಗರ ಪಾಲಿಕೆಯ ಕಛೇರಿಯ ಆವರಣದಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯು ಇತ್ತೀಚಿಗೆ ಕುಸಿದಿತ್ತು. ಹಿಂದೂ ಸಾಮ್ರಾಜ್ಯ ನಿರ್ಮಾಣಕ್ಕೆ ಹೋರಾಡಿದ ಧೀಮಂತ ನಾಯಕ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯು ಏಕಾಏಕಿಯಾಗಿ ಕುಸಿದಿರುವ ಘಟನೆಯ ಕುರಿತಂತೆ ಕುಲಂಕಷವಾಗಿ ತನಿಖೆ ಜರುಗಿಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಮರಾಠಾ ಸಮಾಜ ಬಾಂಧವರು ಒತ್ತಾಯಿಸಿದ್ದಾರೆ.
ಇದೇ ರೀತಿಯಾಗಿ ಇನ್ನುಮುಂದೆ ಯಾವುದೇ ಮಹಾಪುರುಷರ ಪುತ್ಥಳಿಯು ಕುಸಿಯದಿರುವಂತೆ ಎಚ್ಚರಿಕೆ ವಹಿಸಬೇಕೆಂದು ಆಗ್ರಹಿಸಿದರು. ಆದಷ್ಟು ಬೇಗನೆ ಧೀಮಂತ ನಾಯಕನ ಪುತ್ಥಳಿಯನ್ನು ಅದೇ ಸ್ಥಳದಲ್ಲಿ ನಿರ್ಮಾಣ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಬೇಕು. ಇಲ್ಲವಾದಲ್ಲಿ ಪುತ್ಥಳಿಯ ನಿರ್ಮಾಣಕ್ಕಾಗಿ ಮರಾಠಾ ಸಮಾಜ ಬಾಂಧವರು ಉಗ್ರ ಹೋರಾಟ ನಡೆಸಬೇಕಾಗುತ್ತದೆಂದು ಮನವಿಯಲ್ಲಿ ಹೇಳಿದ್ದಾರೆ.
ಮಂಡಳದ ಅಧ್ಯಕ್ಷರಾದ ಮನೋಹರ ಮೋರೆ, ಉಪಾಧ್ಯಕ್ಷರಾದ ಯಲ್ಲಪ್ಪ ಬಿ. ಚವ್ಹಾಣ, ಕಾರ್ಯಾಧ್ಯಕ್ಷರಾದ ಸುಭಾಸ ಶಿಂಧೆ, ಕಾರ್ಯದರ್ಶಿಯಾದ ರಾಜು ಬಿರ್ಜನವರ, ಸಹ-ಕಾರ್ಯದರ್ಶಿಗಳಾದ ದತ್ತಾತ್ರೇಯ.ಮೋಟೆ ಅವರು ಹಾಗೂ ಮಂಡಳದ ನಿರ್ದೇಶಕರುಗಳಾದ ಈಶ್ವರ ಬಿ.ಪಾಟೀಲ, ಸುಭಾಸ ಡಿ.ಪವಾರ, ಅನಿಲಕುಮಾರ ಎಲ್.ಬೋಸಲೆ, ವಿಶ್ಚಲ ಮೈ.ಚವ್ಹಾಣ , ಮಲ್ಲೇಶಪ್ಪಾ ಹೆಚ್ ಶಿಂದೆ, ಸಂತೋಷ ಎಸ್. ಪಿರ್ಜೀನವರ, ರಾಜು.ಜೆ . ಕಾಳೆ, ಸುನಿಲ ಮೋರೆ, ಪ್ರಸಾದ ಎಸ್. ಹಂಗಳಕಿ , ಶಿವಾಜಿ ಸೂರ್ಯವಂಶಿ, ಭೀಮಪ್ಪಾ ಕಾಸಾಯಿ, ಹಾಗೂ ಸಮಾಜ ಬಾಂಧವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.