ಪುತ್ತೂರು ಸರ್ಕಾರಿ ಆಸ್ಪತ್ರೆ ಬಳಿ ‘ಆಕ್ಸಿಜನ್ ಫ್ಲಾಂಟ್’ಗೆ ಶಿಲಾನ್ಯಾಸ ’

ಕೊರೊನಾ ರೋಗಿಗಳಿಗೆ ಆಶಾಕಿರಣ: ನಳಿನ್
ಪುತ್ತೂರು, ಮೇ ೨೦- ಕ್ಯಾಂಪ್ಕೋ ಸಂಸ್ಥೆಯ ಸಹಭಾಗಿತ್ವದಲ್ಲಿ ಸುಮಾರು ರೂ.೧ ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ೪೫೦ ಎಲ್‌ಎಪಿ ಉತ್ಪಾದನಾ ಸಾಮರ್ಥ್ಯದ ಸಿಲಿಂಡರ್ ಆಕ್ಸಿಜನ್ ಫ್ಲಾಂಟ್‌ಗೆ ಬುಧವಾರ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪುತ್ತೂರು ಸರ್ಕಾರಿ ಆಸ್ಪತ್ರೆಯ ಬಳಿ ಶಿಲಾನ್ಯಾಸ ನೆರವೇರಿಸಿದರು.
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಕೋವಿಡ್-೧೯ ಸಾಂಕ್ರಾಮಿಕ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಮರೋಪಾದಿಯಾಗಿ ಕೆಲಸ ನಡೆಯುತ್ತಿದೆ. ಈ ನಡುವೆ ಪುತ್ತೂರಿನಲ್ಲಿ ಕೊರೊನಾಕ್ಕೆ ಸಂಬಂಧಿಸಿದಂತೆ ಆಮ್ಲಜನಕದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಬೇಡಿಕೆಯಂತೆ ಜಿಲ್ಲಾಧಿಕಾರಿಗಳು ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ ಇಲ್ಲಿಗೆ ನೂತನ ಆಕ್ಸಿಜನ್ ಫ್ಲಾಂಟ್ ನಿರ್ಮಾಣವಾಗುವಂತೆ ಮಾಡಿದ್ದಾರೆ. ಈ ಆಕ್ಸಿಜನ್ ಫ್ಲಾಂಟ್ ನಿರ್ಮಾಣದಿಂದ ಪುತ್ತೂರಿನ ಸುತ್ತ ಮುತ್ತಲ ತಾಲೂಕುಗಳಾದ ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕುಗಳಿಗೆ ಸಹಾಯವಾಗಲಿದೆ ಎಂದು ಹೇಳಿದರು.
ಪುತ್ತೂರಿನ ಸರ್ಕಾರಿ ಆಸ್ಪತ್ರೆಯನ್ನು ೩೦೦ ಬೆಡ್‌ನ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಆಕ್ಸಿಜನ್ ಫ್ಲಾಂಟ್ ನಿರ್ಮಾಣದಿಂದ ಮುಂದೆಯೂ ಉಪಯೋಗವಾಗಲಿದೆ. ಇದರೊಂದಿಗೆ ಪುತ್ತೂರಿನಲ್ಲಿರುವ ಶವಾಗಾರದ ಸಮಸ್ಯೆಯನ್ನೂ ಮುಂದಿನ ೨ ದಿನಗಳ ಒಳಗಾಗಿ ಪರಿಹರಿಸಲಾಗುವುದು. ಇದಕ್ಕಾಗಿ ಯೋಜನೆ ಸಿದ್ದಗೊಂಡಿದೆ ಎಂದು ಅವರು ತಿಳಿಸಿದರು.
ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೂಡ್ಗಿ ಮಾತನಾಡಿ ಕ್ಯಾಂಪ್ಕೋ ಸಂಸ್ಥೆಯ ಕೇಂದ್ರ ಕಚೇರಿ ಮಂಗಳೂರಿನಲ್ಲಿದ್ದರೂ ಸಂಸ್ಥೆಯ ಹೃದಯ ಪುತ್ತೂರಿನಲ್ಲಿದೆ. ಸಂಸ್ಥೆಯ ವತಿಯಿಂದ ಆಕ್ಸಿಜನ್ ಫ್ಲಾಂಟ್ ನಿರ್ಮಿಸಲು ಇಲ್ಲಿನ ಶಾಸಕರ ಮುತುವರ್ಜಿಯೇ ಕಾರಣವಾಗಿವೆ. ಅವರ ಆಗ್ರಹದಂತೆ ಹೆಚ್ಚಿನ ಅನುದಾನವನ್ನು ಫ್ಲಾಂಟ್ ನಿರ್ಮಾಣಕ್ಕಾಗಿ ನೀಡಲಾಗುತ್ತಿದೆ ಎಂದರು.
ಪುತ್ತೂರು ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್, ತಾಪಂ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್, ಪುಡಾ ಅಧ್ಯಕ್ಷ ಭಾಮಿ ಅಶೋಕ ಶೆಣೈ,
ತಾಲೂಕು ಆರೋಗ್ಯಾಧಿಕಾರಿ ಅಶೋಕ್ ಕುಮಾರ್ ರೈ, ಸರ್ಕಾರಿ ಆಸ್ಪತ್ರೆಯ
ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಕ್ಯಾಂಪ್ಕೋ ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ, ತಹಸೀಲ್ದಾರ್ ರಮೇಶ್ ಬಾಬು, ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರು ಉಪಸ್ಥಿತರಿದ್ದರು.