ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಶೀಘ್ರದಲ್ಲಿ ನೂತನ ಆಕ್ಸಿಜನ್ ಪ್ಲಾಂಟ್

ಪುತ್ತೂರು, ಎ.೩೦- ದೇಶದಲ್ಲಿ ಆಮ್ಲಜನಕ ಕೊರತೆ ಕಾಡುತ್ತಿರುವ ಪ್ರಸ್ತುತ ಸನ್ನಿವೇಶದ ಹಿನ್ನಲೆಯಲ್ಲಿ ಮುಂಬರುವ ದಿನಗಳಲ್ಲಿ ಪುತ್ತೂರಿನಲ್ಲಿ ಇಂತಹ ಸ್ಥಿತಿ ಬರದಂತೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲೂ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದ್ದು, ಆದರೆ ಇದೀಗ ಗಿಲ್ ಕಂಪೆನಿಯ ಸಿಎಸ್‌ಆರ್ ಪಂಡ್‌ನಿಂದ ಹೊಸದಾಗಿ ಆಕ್ಸಿಜನ್ ಪ್ಲಾಂಟ್ ಅತಿ ಶೀರ್ಘದಲ್ಲಿ ನಿರ್ಮಾಣ ಆಗಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿರು ವುದಾಗಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಕೊರೊನಾ ೨ನೇ ಅಲೆ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರೋಗಿಗಳಿಗೆ ಆಕ್ಸಿಜನ್ ಕೊರತೆ ಕಾಡುತ್ತಿದೆ. P ಸಾರ್ವಜನಿಕ ಹಿತದೃಷ್ಟಿಯಿಂದ ಪುತ್ತೂರಿನಲ್ಲೂ ಶಾಸಕರ ವಾರ್ ರೂಮ್ ಕೋವಿಡ್ ನಿಯಂತ್ರಣ ಮಾಡುವ ದೃಷ್ಟಿಯಿಂದ ತಂಡ ಕೆಲಸ ಮಾಡುತ್ತಿದೆ. ಇದೀಗ ಜಿಲ್ಲಾ ಆರೋಗ್ಯಾಧಿಕಾರಿ ಪುತ್ತೂರಿಗೆ ಹೊಸ ಸುದ್ದಿಯೊಂದನ್ನು ನೀಡಿದ್ದು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಗಿಲ್ ಕಂಪೆನಿಯಿಂದ ಆಕ್ಸಿಜನ್ ಪ್ಲಾಂಟ್ ಅನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಸಿ.ಎಸ್.ಆರ್. ಅನುದಾನದಲ್ಲಿ ಕೊಡುವಂತೆ ಕೆಲಸ ಮಾಡಿದ್ದಾರೆ. ಇನ್ನೆರಡು ದಿನಗಳಲ್ಲಿ ಈ ಕುರಿತು ಆದೇಶ ಬರಲಿದೆ. ಮುಂದಿನ ದಿನ ಪುತ್ತೂರಿಗೆ ಸಾಕಷ್ಟು ಆಕ್ಸಿಜನ್ ನೂತನ ಪ್ಲಾಂಟ್ ಮೂಲಕ ಪಡೆಯಬಹುದು ಎಂದು ಅವರು ಹೇಳಿದರು.
ಮೊರಾರ್ಜಿದೇಸಾಯಿ ಶಾಲೆ ಕೊರೊನಾ ಆಸ್ಪತ್ರೆ
ಕೋವಿಡ್ ಸೋಂಕಿಗೆ ಸಂಬಂಧಿಸಿ ಆಸ್ಪತ್ರೆಯ ವಾರ್ಡ್‌ಗಳಲ್ಲಿ ಸ್ಥಳಾವಕಾಶದ ಕೊರತೆ ಕಂಡುಬಂದರೆ ಮೊರಾಜಿ ದೇಸಾಯಿ ವಸತಿ ಶಾಲೆಯನ್ನು ಕೊರೊನಾ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಖಾಸಗಿ ೨೮ ಬೆಡ್‌ಗಳು ಅದನ್ನು ಹೊರತಾಗಿಯೂ ಖಾಸಗಿ ಆಸ್ಪತ್ರೆಯಲ್ಲಿ ಸಾಕಷ್ಟು ಬೆಡ್‌ಗಳನ್ನು ಕೊಡುವುದಾಗಿ ಅಸ್ಪತ್ರೆಯ
ಮುಖ್ಯಸ್ಥರು ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ
ಪುತ್ತೂರಿನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ೨೮ ಆಕ್ಸಿಜನ್ ಬೆಡ್, ೪ ವೆಂಟಿಲೇಟರ್ ಇದೆ. ವೆಂಟಿಲೇಟರ್ ಅನ್ನು ಅರಿವಳಿಕೆ ತಜ್ಞರು ಮತ್ತು ತಾಂತ್ರಿಕ ಸಿಬ್ಬಂದಿ ಒಳಗೊಂಡ ಸಮಿತಿ ನಾಳೆಯಿಂದ ಅವಶ್ಯಕತೆ ಕಂಡರೆ ರೋಗಿಗಳಿಗೆ ಚಿಕಿತ್ಸೆ ಕೊಡಲಿದ್ದಾರೆ. ಜೊತೆಗೆ ಮುಂದಿನ ದಿನ ಅವಶ್ಯತೆ ಬಿದ್ದರೆ ಆಸ್ಪತ್ರೆಯ ಇತರ ವಾರ್ಡ್‌ಗಳನ್ನೂ ಕೂಡಾ ಕೋವಿಡ್ ವಾರ್ಡ್‌ಗಳನ್ನಾಗಿ ಮಾಡಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಅವರು ನಾಳೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಶಾಸಕರು ತಿಳಿಸಿದರು.