ಪುತ್ತೂರು ಮಹಾಲಿಂಗೇಶ್ವರ ದೇವಾಲಯ ಅಭಿವೃದ್ಧಿಗೆ ರೂ.೨೭ ಕೋ ಮಾಸ್ಟರ್ ಪ್ಲಾನ್

ಪುತ್ತೂರು, ಮಾ.೧೫- ಶತಮಾನಗಳ ಇತಿಹಾಸವಿರುವ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿಗೆ ರೂ.೨೭ ಕೋಟಿಯ ಮಾಸ್ಟರ್ ಪ್ಲಾನ್ ಸಿದ್ದಪಡಿಸಲಾಗಿದ್ದು, ರಾಜ್ಯದ ಧಾರ್ಮಿಕ ದತ್ತಿ ಸಚಿವರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ದೇವಾಲಯದ ವ್ಯವಸ್ಥಾಪನಾ ಸಮಿತಿಯು ೧೯ ಅಂಶಗಳ ಒಟ್ಟು ಯೋಜನೆಗಳನ್ನು ಸಿದ್ದಪಡಿಸಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಭಾನುವಾರ ಇತಿಹಾಸ ಪ್ರಸಿದ್ದ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆದ ದೇವಾಲಯದ ಸಮಗ್ರ ಅಭಿವೃದ್ಧಿ ಯೋಜನಾ ಸಭೆಯಲ್ಲಿ ಮಾತನಾಡಿದರು.

 ದೇವಾಲಯದ ವ್ಯವಸ್ಥಾಪನಾ ಸಮಿತಿಯು ಮುಂದಿನ ೫೦ ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿರಿಸಿ ದೂರದರ್ಶಿತ್ವದ ಯೋಜನೆಯನ್ನು ಸಿದ್ದಪಡಿಸಿದೆ. ಈಗಾಗಲೇ ನೀಲನಕಾಶೆ ಸಿದ್ದವಾಗಿದೆ. ಹಂತ ಹಂತಗಳಲ್ಲಿ ಮೂರು ವರ್ಷಗಳ ಅವಧಿಯೊಳಗೆ ಮಾಸ್ಟರ್ ಪ್ಲಾನ್ ಅನುಷ್ಠಾನಗೊಳ್ಳಲಿದೆ. ಇದಕ್ಕೆ ಕೇವಲ ಸರ್ಕಾರದ ಅನುದಾನವಲ್ಲದೆ ಇತರ ನಿಧಿಗಳು ಮತ್ತು ದಾನಿಗಳ ನೆರವನ್ನು ಪಡೆಯಲಾಗುವುದು.  ಶಾಸಕ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ನೀಡಲಾಗುವುದು ಎಂದರು.

ಪುಷ್ಕರಣಿ ಅಭಿವೃದ್ಧಿಗೆ ರೂ.೪೦ ಲಕ್ಷ ಬಳಕೆ

ಪುತ್ತೂರು ಪುಡಾದಿಂದ ದೇವಾಲಯದ ಪುಣ್ಯ ಪುಷ್ಕರಣಿಯನ್ನು ಅಭಿವೃದ್ಧಿಗೊಳಿಸಲು ರೂ. ೪೦ ಲಕ್ಷ ಮಂಜೂರುಗೊಳಿಸಲಾಗಿದೆ. ಪ್ರವಾಸೋದ್ಯಮ ಇಲಾಖಾ ವ್ಯಾಪ್ತಿಗೆ ದೇವಾಲಯವನ್ನು ಸೇರ್ಪಡೆಗೊಳಿಸಿರುವುದರಿಂದ ಯಾತ್ರಿನಿವಾಸ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯ ಅನುದಾನ ಕೂಡಾ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.  ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಯೋಜನೆಯ ಕುರಿತು ಸ್ಲೈಡ್ ಶೋ ಮೂಲಕ ವಿವರಣೆ ನೀಡಿದರು.

ಸಿಬ್ಬಂದಿ ವಸತಿ ಗ್ರಹ, ಅನ್ನಛತ್ರ, ದೇವಾಲಯದ ಕಲ್ಯಾಣ ಮಂಟಪ, ಕಿಯೋಸ್ಕ್‌ಗಳು, ಸುಸಜ್ಜಿತ ಶೌಚಾಲಯಗಳು, ಗೋಶಾಲೆ ಇತ್ಯಾದಿ ಅಂಶಗಳನ್ನು ಮಾಸ್ಟರ್ ಪ್ಲಾನ್‌ನಲ್ಲಿ ಸೇರಿಸಲಾಗಿದೆ. ಸಭೆಯಲ್ಲಿ ನಿವೃತ್ತ ಉಪನ್ಯಾಸಕ ವಿಷ್ಣುಭಟ್, ಡಾ. ಕೆ. ಸುರೇಶ್ ಪುತ್ತೂರಾಯ, ಸುದರ್ಶನ್ ಮುರ, ಬಪ್ಪಳಿಗೆ ಕಿಟ್ಟಣ್ಣ ಗೌಡ, ನಾಗೇಶ್ ಭಟ್ ಮತ್ತಿತರರು ಸಲಹೆ ಸೂಚನೆ ನೀಡಿದರು. ಮಾಜಿ ಪುರಸಭಾಪತಿ ರಾಜೇಶ್ ಬನ್ನೂರು ಸಂವಾದಕಾರರಾಗಿ ಸಹಕರಿಸಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವೀಣಾ ಬಿ.ಕೆ, ಬಿ. ಐತ್ತಪ್ಪ ನಾಯ್ಕ್, ವೇ.ಮೂ. ವಿ.ಎಸ್.ಭಟ್, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್ ಉಪಸ್ಥಿತರಿದ್ದರು.

ವ್ಯವಸ್ಥಾಪನಾ ಸಮಿತಿಯ ಸದಸ್ಯ ರಾಮದಾಸ ಗೌಡ ಸ್ವಾಗತಿಸಿ, ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ  ಬಳ್ಳಮಜಲು ವಂದಿಸಿದರು. ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಡಾ. ಸುಧಾ ಎಸ್ ರಾವ್ ಕಾರ್ಯಕ್ರಮ ನಿರೂಪಿಸಿದರು.