ಪುತ್ತೂರು ಪುಡಾ ಅಧ್ಯಕ್ಷರಾಗಿ ‘ಭಾಮಿ’

ಪುತ್ತೂರು, ಡಿ.೧೭- ಪ್ರತಿಷ್ಠಿತ ಪುತ್ತೂರು ನಗರ ಯೋಜನಾ ಪ್ರಾಧಿಕಾರ ‘ಪುಡಾ’ದ ಅಧ್ಯಕ್ಷರಾಗಿ ಬಿಜೆಪಿಯ ಹಿರಿಯ ಕಾರ್ಯಕರ್ತ ನಗರಸಭಾ ಸದಸ್ಯ ಭಾಮಿ ಅಶೋಕ್ ಶೆಣೈ ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಶಿಫಾರಸ್ಸಿನಂತೆ ಈ ನೇಮಕಾತಿ ನಡೆದಿದೆ.

ಎರಡನೇ ಅವಧಿಗೆ

೨೦೦೮ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದ ಸಂದರ್ಭ ಪುತ್ತೂರು ಪುಡಾದ ಅಧ್ಯಕ್ಷರಾಗಿ ಭಾಮಿ ಅಶೋಕ್ ಶೆಣೈ ಅವರು ನೇಮಕಗೊಂಡಿದ್ದರು. ಇದೀಗ ಎರಡನೇ ಬಾರಿಗೆ ಅವರು ನೇಮಕಗೊಳ್ಳುತ್ತಿದ್ದಾರೆ. ಪುತ್ತೂರು ಪುರಸಭೆಯ ಉಪಾಧ್ಯಕ್ಷರಾಗಿ, ಪುತ್ತೂರು ನಗರಸಭೆಯ ಹಾಲಿ ಸದಸ್ಯರಾಗಿರುವ ಭಾಮಿ ಅಶೋಕ್ ಶೆಣೈ ಭಾರತೀಯ ಜನಸಂಘ ಕಾಲದಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರೇರಿತ ಕಾರ್ಯಕರ್ತರಾಗಿದ್ದರು.  

ಸರಳ ಬದುಕಿನ ಅಶೋಕ್ ಶೆಣೈ ಅವರು ರಾಜಕೀಯವಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡರೂ ಭಾಮಿ ಅಶೋಕ್ ಶೆಣೈ ಅಜಾತಶತ್ರು ವ್ಯಕ್ತಿತ್ವವನ್ನು ರೂಢಿಸಿಕೊಂಡವರು. ತಮ್ಮ ಬಳಿ ಯಾರೇ ಸಹಾಯಕ್ಕೆ ಬಂದರೂ ಅವರಿಗೆ ನ್ಯಾಯ ಕೊಡಿಸುವ ಸಾಮಾಜಿಕ ಬದ್ಧತೆಯ ಕಾರ್ಯಕರ್ತರಾಗಿ ಇವರು ಕೆಲಸ ಮಾಡುತ್ತಿದ್ದಾರೆ.