ಪುತ್ತೂರು ನಗರಸಭೆ ಪೌರಕಾರ್ಮಿಕರಿಗೆ ಟಿಪ್ಪರ್-ಫಾಗಿಂಗ್ ಯಂತ್ರ ಹಸ್ತಾಂತರ


ಪುತ್ತೂರು, ಮೇ ೩೧- ನಗರಸಭಾ ವ್ಯಾಪ್ತಿಯಲ್ಲಿನ ಮನೆ ಮನೆ ತ್ಯಾಜ್ಯ ಸಂಗ್ರಹಕ್ಕಾಗಿ ಖರೀದಿಸಲಾದ ೨ ಮಿನಿ ಟಿಪ್ಪರ್ ಲಾರಿ ಮತ್ತು ೪ ಫಾಗಿಂಗ್ ಯಂತ್ರದ ಕಾರ್ಯ ಚಟುವಟಿಕೆಗಳಿಗೆ ಪುತ್ತೂರು ನಗರಸಭಾ ಆವರಣದಲ್ಲಿ ಶಾಸಕ ಸಂಜೀವ ಮಠಂದೂರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿಗಳ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ರೂ. ೩೦ ಲಕ್ಷ ವೆಚ್ಚದಲ್ಲಿ ೨ ಮಿಟಿ ಟಿಪ್ಪರ್‌ಗಳನ್ನು ಖರೀದಿಸಿ ಪುತ್ತೂರು ನಗರಸಭೆಯು ಆತ್ಮನಿರ್ಭರ ಪುತ್ತೂರು ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ. ಸಮರ್ಪಕ ತ್ಯಾಜ್ಯ ನಿರ್ವಹಣೆಯೊಂದಿಗೆ ಸ್ವಚ್ಚ ಪುತ್ತೂರು ಸುಂದರ ಪುತ್ತೂರು ಪರಿಕಲ್ಪನೆ ಸಾಕಾರಗೊಳ್ಳಲಿದೆ. ಇದರೊಂದಿಗೆ ಕೊರೋನಾ ಸಮಸ್ಯೆಗಳ ನಡುವೆ ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಸೊಳ್ಳೆ ನಿಯಂತ್ರಣಕ್ಕಾಗಿ ಫಾಗಿಂಗ್ ಯಂತ್ರಗಳನ್ನು ಖರೀದಿಸಿ ನಗರಸಭಾ ವ್ಯಾಪ್ತಿಯ ಎಲ್ಲೆಡೆ ಉಪಯೋಗಿಸುವ ಕಾರ್ಯ ನಡೆಸುತ್ತಿದೆ. ಇದು ನಗರಸಭೆಯ ಆಡಳಿತದ ಬದ್ಧತೆಯನ್ನು ತೋರಿಸುತ್ತದೆ ಎಂದರು.
ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಪುತ್ತೂರು ನಗರಸಭಾ ವ್ಯಾಪ್ತಿಯ ಎಲ್ಲಾ ೩೧ ವಾರ್ಡ್‌ಗಳಲ್ಲಿಯೂ ಕಸವನ್ನು ಹಸಿಕಸ ಮತ್ತು ಒಣಕಸವಾಗಿ ವಿಂಗಡಣೆ ಮಾಡಿ ಸಂಗ್ರಹಿಸಲಾಗುತ್ತಿದೆ. ತ್ಯಾಜ್ಯ ನಿರ್ವಹಣೆಗಾಗಿ ದೊಡ್ಡ ಮಟ್ಟದ ಬಯೋಗ್ಯಾಸ್ ವ್ಯವಸ್ಥೆಯನ್ನು ಮಾಡಲಾಗುವುದು. ನೂತನವಾಗಿ ಖರೀದಿಸಿರುವ ಮಿನಿ ಟಿಪ್ಪರ್ ಮೂಲಕ ಮನೆ ಮನೆ ತ್ಯಾಜ್ಯ ಸಂಗ್ರಹ ಮಾಡಲಾಗುವುದು. ಇದರೊಂದಿಗೆ ಡೆಂಗ್ಯೂ, ಮಲೇರಿಯಾ ತಡೆಯುವ ನಿಟ್ಟಿನಲ್ಲಿ ಎಲ್ಲಾ ಕಡೆಗಳಲ್ಲಿ ಫಾಗಿಂಗ್ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ಸಂಜೀವ ಮಠಂದೂರು ಅವರು ನೂತನ ಫಾಗಿಂಗ್ ಯಂತ್ರವನ್ನು ಪೌರ ಕಾರ್ಮಿಕರಿಗೆ ಹಾಗೂ ನೂತನ ಮಿನಿ ಟಿಪ್ಪರ್ ಕೀಲಿಯನ್ನು ಚಾಲಕರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಗೌಡ ಸಾರಸ್ವತ ಬ್ರಾಹ್ಮಣ(ಜಿಎಸ್‌ಬಿ) ಸಂಘಟನೆಯಿಂದ ಕೊರೋನಾ ಸೋಂಕಿತರಿಗೆ ಔಷಧಿ ನೀಡಲಾಯಿತು. ಜಿಎಸ್‌ಬಿ ಹಿರಿಯ ಮುಖಂಡ ರಾಧಾಕೃಷ್ಣ ಭಕ್ತ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಮೋರ್ಚಾದ ಜಿಲ್ಲಾ ಅಧ್ಯಕ್ಷ ಆರ್.ಸಿ. ನಾರಾಯಣ ಮತ್ತು ನಗರ ಅಧ್ಯಕ್ಷ ಶಿವರಾಮ ಸಫಲ್ಯ, ನಗರಸಭಾ ಉಪಾಧ್ಯಕ್ಷೆ ವಿದ್ಯಾ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಪೌರಾಯುಕ್ತ ಮಧು ಎಸ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ ಶೆಣೈ ಉಪಸ್ಥಿತರಿದ್ದರು.