ಪುತ್ತೂರು ತಾಲೂಕಿನಲ್ಲಿ ಶಾಂತಿಯುತ ಚುನಾವಣೆ, ಶೇ ೭೮ ಮತದಾನ

smart

೭೩೧ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ

ಪುತ್ತೂರು, ಡಿ.೨೮- ಸ್ಥಳೀಯಾಡಳಿತಗಳ ಅಧಿಕಾರಕ್ಕಾಗಿ ತಾಲೂಕಿನ ೨೨ ಗ್ರಾಪಂಗಳ ೩೨೨ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ ೭೮.೪೫ ಮತಚಲಾವಣೆಯಾಗಿದ್ದು, ತಾಲೂಕಿನಾದ್ಯಂತ ಶಾಂತಿಯುತ ಮತದಾನ ಪ್ರಕ್ರಿಯೆ ನಡೆಯಿತು. ತಾಲೂಕಿನಲ್ಲಿ ಒಟ್ಟು ೮೪೩೩೧ ಮಂದಿ ಮತದಾನದ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ ೪೧೯೭೬ ಪುರುಷರು ಮತ್ತು ೪೨೩೫೫ ಮಹಿಳೆಯರು ಮತದಾನದಲ್ಲಿ ಪಾಲ್ಗೊಂಡಿದ್ದಾರೆ.

ಭಾನುವಾರವಾದ ಕಾರಣ ತಾಲೂಕಿನಲ್ಲಿ ಮುಂಜಾನೆ ಮಂದಗತಿಯಲ್ಲಿ ಮತದಾನ ಆರಂಭಗೊಂಡಿತು. ಮುಂಜಾನೆ ೭ರಿಂದ ೯ ಗಂಟೆಯ ತನಕ ಕೇವಲ ಶೇ.೧೫ ಮತದಾನ ನಡೆದಿತ್ತು. ನಂತರ ಮತದಾನ ಚುರುಕುಗೊಂಡಿತು. ತಾಲೂಕಿನಲ್ಲಿ ೫೫,೦೨೪ ಪುರುಷ, ೫೬,೦೨೯ ಮಹಿಳೆಯರು ಸೇರಿದಂತೆ ಒಟ್ಟು ೧,೧೧,೦೫೩ ಮತದಾರರಿದ್ದು, ೧೦೬ ವಾರ್ಡ್‌ಗಳಿಗೆ ೩೪೨ ಅಭ್ಯರ್ಥಿಗಳು ಆಯ್ಕೆಯಾಗಬೇಕಾಗಿತ್ತು. ಆದರೆ ಈ ಪೈಕಿ ೮ ಗ್ರಾಪಂಗಳಲ್ಲಿನ ೨೧ ಮಂದಿ ಅವಿರೋಧವಾಗಿ ಆಯ್ಕೆಯಾಗಿರುವ ಕಾರಣ ೧೦೩ ಶಾಶ್ವತ ಮತಗಟ್ಟೆಗಳ ಜೊತೆಗೆ ೪೨ ಹೆಚ್ಚುವರಿ ಸೇರಿ ಒಟ್ಟು ೧೪೫ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ತಾಲೂಕಿನ ೩೨೨ ಸ್ಥಾನಗಳಿಗಾಗಿ ೭೩೧ ಮಂದಿ ಕಣದಲ್ಲಿದ್ದಾರೆ. ಈ ಅಭ್ಯರ್ಥಿಗಳ ಭವಿಷ್ಯ ಇದೀಗ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ತಾಲೂಕಿನಲ್ಲಿ ನೆಟ್ಟಣಿಗೆ ಮುಡ್ನೂರು ಗ್ರಾಪಂನಲ್ಲಿ ೩ ಮತ್ತು ಕುಂಬ್ರದಲ್ಲಿ ೨ ಮತಗಟ್ಟೆಗಳನ್ನು ಅತೀಸೂಕ್ಷ್ಮ ಹಾಗೂ ೩೫ ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳು ಹಾಗೂ ೧೦೫ ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳಾಗಿ ವಿಂಗಡಿಸಲಾಗಿತ್ತು.

ಮತಕೇಂದ್ರದಲ್ಲಿ ‘ಮಾದರಿಪತ್ರ ಜಾಲ

ಪುತ್ತೂರು ತಾಲೂಕಿನ ಹಂಟ್ಯಾರು ಶಾಲಾ ಮತಗಟ್ಟೆಯಲ್ಲಿ ಮತದಾರರಿಗೆ ಈ ಮಾದರಿ ಮತಪತ್ರಗಳನ್ನು ನೀಡಿ ಇದನ್ನು ನೋಡಿಯೇ ಮತ ಹಾಕಿ ಎಂದು ಮತದಾರರಿಗೆ ಅಭ್ಯರ್ಥಿಗಳ ಬೆಂಬಲಿಗರು ನೀಡುತ್ತಿರುವುದು ಪ್ರಕರಣವನ್ನು ಚುನಾವಣಾಧಿಕಾರಿ ಡಾ.ಯತೀಶ್ ಉಳ್ಳಾಲ್ ಪತ್ತೆ ಹಚ್ಚಿದ್ದಾರೆ. ಅಭ್ಯರ್ಥಿಗಳ ಚಿಹ್ನೆಯ ಗುರುತಿಗಾಗಿ ಮತದಾನಕ್ಕೆ ಬಂದ ಮತದಾರರಿಗೆ ಅಭ್ಯರ್ಥಿ ಚಿಹ್ನೆ ಹೊಂದಿರುವ ಈ ಮಾದರಿ ಪತ್ರಗಳನ್ನು ನೀಡಲಾಗುತ್ತಿತ್ತು.  ಮತದಾರರ ಕೈಯಲ್ಲಿದ್ದ ಈ ಮಾದರಿ ಮತಪತ್ರವನ್ನು ಗಮನಿಸಿದ ಚುನಾವಣಾಧಿಕಾರಿ ಅವರು ಈ ಬಗ್ಗೆ ಪ್ರಶ್ನಿಸಿದ್ದು, ಅಭ್ಯರ್ಥಿಗಳ ಪ್ರಚಾರಕ್ಕಾಗಿ ಹಾಕಲಾದ ಟೆಂಟ್ ಒಂದರಲ್ಲಿ ಮಾದರಿ ಮತಪತ್ರಗಳ ಕಟ್ಟು ಪತ್ತೆಯಾಗಿತ್ತು. ತಕ್ಷಣ ಅಧಿಕಾರಿಗಳಿಗೆ ಈ ಮಾದರಿ ಮತಪತ್ರಗಳನ್ನು ವಶಪಡಿಸಿಕೊಳ್ಳುವಂತೆ ಸೂಚನೆ ನೀಡಿದರು.

ವಾಹನ ಚಾಲಕರಿಗೆ ತರಾಟೆ

ಖಾಸಗಿ ವಾಹನಗಳಲ್ಲಿ ಮತದಾರರನ್ನು ಸಾಗಿಸುತ್ತಿದ್ದ ವಾಹನ ಚಾಲಕರನ್ನು  ಅಧಿಕಾರಿಗಳು ತರಾಟೆಗೆ ತೆಗೆದುಕೊಂಡ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರು ಹಾಗೂ ತಿಂಗಳಾಡಿ ಮತಕೇಂದ್ರಗಳಲ್ಲಿ ನಡೆದಿದೆ. ಗ್ರಾಮೀಣ ಭಾಗದ ಮತಕೇಂದ್ರಗಳಿಗೆ ವಾಹನಗಳಲ್ಲಿ ಮತದಾರರನ್ನು ಕರೆದೊಯ್ಯುವ ಕೆಲಸ ನಿರಂತರವಾಗಿ ನಡೆದಿದೆ. ಇದು ಮತದಾರರಿಗೆ ಆಮಿಷ ಒಡ್ಡುವ ಕೆಲಸ ಎಂಬ ಹಿನ್ನಲೆಯಲ್ಲಿ ಅಧಿಕಾರಿಗಳು ವಾಹನ ಚಾಲಕರನ್ನು ತರಾಟೆಗೆ ತೆಗೆದುಕೊಂಡು ಮತಕೇಂದ್ರಗಳಲ್ಲಿ ಈ ರೀತಿಯ ವಾಹನ ಸಂಚಾರಕ್ಕೆ ತಡೆ ಹಾಕಿದರು.  ಹಾಗಿದ್ದರೂ ಬಹುತೇಕ ಗ್ರಾಪಂಗಳ ಮತಗಟ್ಟೆಗಳಲ್ಲಿ ಮತದಾರರನ್ನು ವಾಹನಗಳ ಮೂಲಕ ಕರೆ ತಂದು ಮತ ಹಾಕಿಸುವ ಕೆಲಸ ನಿರಂತರವಾಗಿ ನಡೆದಿದೆ.

೧೦೬ ವರ್ಷದ ವೃದ್ದೆಯಿಂದ ಮತದಾನ

ಉಪ್ಪಿನಂಗಡಿ ಗ್ರಾಪಂನ ೬ ವಾರ್ಡ್‌ನಲ್ಲಿ ೧೦೬ ವರ್ಷದ ವೃದ್ಧೆ ಬೊಮ್ಮಿ ಕುಂಟಿನಿ ಅವರು ಉಪ್ಪಿನಂಗಡಿ ಪ್ರೌಢಶಾಲಾ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಉಪ್ಪಿನಂಗಡಿ ಕಸಬಾ ವ್ಯಾಪ್ತಿಯ

ಕುಂಟಿನಿ ನಿವಾಸಿ ಬೊಮ್ಮಿ ಅವರು ತನ್ನ ಮೊಮ್ಮಗ ಕೇಶವ ಗೌಡ ಅವರ ಸಹಾಯದಿಂದ ಮತ ಚಲಾಯಿಸಿದರು. ಉಪ್ಪಿನಂಗಡಿಯ ೨ನೇ ವಾರ್ಡಿನಲ್ಲಿ ಅನಾರೋಗ್ಯ ಪೀಡಿತ ಮಾಧವ ಹೆಗ್ಡೆ ಅವರು ಮತ ಚಲಾಯಿಸಿದರು.

ಮತಗಟ್ಟೆಗಳಲ್ಲಿ ವೃದ್ದರಿಗೆ ಮತ್ತು  ಅನಾರೋಗ್ಯ ಪೀಡಿತರಿಗಾಗಿ ಚುನಾವಣಾ ಆಯೋಗದ ಸೂಚನೆಯಂತೆ ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿತ್ತು.