ಪುತ್ತೂರು ಜಾತ್ರೆ-ವಿಜೃಂಭಣೆಯ `ದರ್ಶನಬಲಿ’ ಸೇವೆ

ಪುತ್ತೂರು, ಎ.೧೮- ಏಪ್ರಿಲ್ ಹತ್ತರಂದು ಆರಂಭಗೊಂಡಿರುವ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಶನಿವಾರ ದೇವಳದಲ್ಲಿ ದೇವರ ದರ್ಶನ ಬಲಿ ಸೇವೆ ವಿಜೃಂಭಣೆಯಿಂದ ನಡೆಯಿತು.
ದೇವಳದ ತಂತ್ರಿಗಳಾದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿ ಉತ್ಸವ ನಡೆಯಿತು. ದೇವರ ದರ್ಶನ ಬಲಿ ಸೇವೆಯನ್ನು ನೂರಾರು ಭಕ್ತರು ಭಕ್ತಿಭಾವಗಳಿಂದ ವೀಕ್ಷಿಸಿದರು. ಮಧ್ಯಾಹ್ನ ಬಟ್ಟಲು ಕಾಣಿಕೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಿತು.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ಡಿವೈಎಸ್‌ಪಿ ಗಾನಾ ಪಿ. ಕುಮಾರ್, ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ರಾಮದಾಸ್ ಗೌಡ, ರಾಮಚಂದ್ರ ಕಾಮತ್, ರವೀಂದ್ರನಾಥ ರೈ, ಬಿ. ಐತ್ತಪ್ಪ ನಾಯ್ಕ್, ಸುಧಾ ರಾವ್, ಬಿ.ಕೆ. ವೀಣಾ, ಪ್ರಧಾನ ಅರ್ಚಕ ವಿ.ಎಸ್. ಭಟ್., ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ಶುಕ್ರವಾರ ರಾತ್ರಿ ವರ್ಷಂಪ್ರತಿ ಬರುವ ಬಲ್ನಾಡ್ ಉಳ್ಳಾಲ್ತಿ- ದಂಡನಾಯಕ ದೈವಗಳ ಕಿರುವಾಳು ಭಂಡಾರ ದೇವಸ್ಥಾನಕ್ಕೆ ಆಗಮಿಸಿತು. ದೇವಳದ ಒಳಾಂಗಣದಲ್ಲಿ ಮಹಾಲಿಂಗೇಶ್ವರ ಮತ್ತು ಉಳ್ಳಾಲ್ತಿ-ದಂಡನಾಯಕ ದೈವಗಳ ಮುಖಾಮುಖಿಯನ್ನು ಭಕ್ತರು ಕಣ್ತುಂಬಿಸಿಕೊಂಡರು.

ದೈವಗಳು ಮತ್ತು ದೇವರು ಪರಸ್ಪರ ಅಭಿಮುಖರಾಗಿದ್ದುಕೊಂಡೇ ಅಪೂರ್ವ ಉತ್ಸವ ಬಲಿ ನಡೆಯಿತು. ಇದಾದ ನಂತರ ರಾತ್ರಿ ದೇವರ ಸಣ್ಣ ರಥೋತ್ಸವ ಹೊರಾಂಗಣದಲ್ಲಿ ನಡೆಯಿತು. ನಂತರ ದೇಗುಲದ ಪುಷ್ಕರಣಿಯಲ್ಲಿ ಕೆರೆ ಆಯನ ಸಂಪನ್ನಗೊಂಡಿತು.