ಪುತ್ತೂರು ಜಾತ್ರೆಗೆ ‘ಗೊನೆ ಮುಹೂರ್ತ’

ಪುತ್ತೂರು,ಏ.೨- ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೆಗೆ ಗುರುವಾರ ಬೆಳಿಗ್ಗೆ ೯.೩೦ರ ವೃಷಭ ಲಗ್ನದಲ್ಲಿ ಗೊನೆ ಮುಹೂರ್ತ ನೆರವೇರಿಸಲಾಯಿತು. ದೇವಳದ ಮುಂಭಾಗದಲ್ಲಿರುವ ಕಂಬಳಕೋಡಿ ಮೋನಪ್ಪ ಸಫಲ್ಯ ಅವರ ತೋಟದಲ್ಲಿ ಬಾಳೆಗೊನೆಗೆ ಪೂಜೆ ನೆರವೇರಿಸಿ ನಂತರ ಗೊನೆ ಕಡಿಯುವ ಮೂಲಕ ಮುಹೂರ್ತ ನಡೆಸಲಾಯಿತು.
ದೇವಳದ ಪ್ರಧಾನ ಅರ್ಚಕ ವಿ.ಎಸ್. ಭಟ್ ಅವರು ಗೊನೆ ಮುಹೂರ್ತ ನಡೆಸಿಕೊಟ್ಟರು. ದೇವಾಲಯದಿಂದ ವಾದ್ಯ ಘೋಷಗಳೊಂದಿಗೆ ಗದ್ದೆಯ ಪಕ್ಕದಲ್ಲಿರುವ ತೋಟದಿಂದ ಗೊನೆ ಕಡಿದು ಮೆರವಣಿಗೆಯಲ್ಲಿ ದೇವಾಲಯಕ್ಕೆ ಬಾಳೆ ಗೊನೆಯನ್ನು ತರಲಾಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಉಪಸ್ಥಿತರಿದ್ದರು.
ಎಪ್ರಿಲ್ ೧ ರಿಂದ ೧೭ ತನಕ ಜಾತ್ರಾ ವಿಧಿವಿದಾನಗಳು ನಡೆಯಲಿದ್ದು, ಪುತ್ತೂರು ಜಾತ್ರೆಗೆ ಸಂಬಂಧಿಸಿದಂತೆ ಪೂರ್ವಶಿಷ್ಠ ಸಂಪ್ರದಾಯಗಳನ್ನು ಸಾಂಪ್ರದಾಯಿಕ ನೆಲೆಯಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ. ತುಳು ಪಂಚಾಂಗದ ನಲ್ಕುರಿಯಂತೆ ಪ್ರತೀವರ್ಷ ಏ. ೧ರಂದು ವಾರ್ಷಿಕ ಜಾತ್ರೆಯ ಗೊನೆಮುಹೂರ್ತ, ಏ. ೧೦ರಂದು ವಾರ್ಷಿಕ ಜಾತ್ರೆಯ ಧ್ವಜಾರೋಹಣ, ಏ. ೧೭ರಂದು ದೇವರ ಬ್ರಹ್ಮರಥೋತ್ಸವ ನಡೆಯುತ್ತದೆ. ಜಾತ್ರೋತ್ಸವದ ಅಂಗವಾಗಿ ಬ್ರಹ್ಮರಥೋತ್ಸವದ ದಿನ ನಡೆಯುವ ‘ಪುತ್ತೂರು ಬೆಡಿ’ ಎಂದೇ ಖ್ಯಾತಿಯಾದ ಸಿಡಿಮದ್ದು ಪ್ರದರ್ಶನ ಪುತ್ತೂರು ಸೀಮೆಯಲ್ಲಿ ಅತ್ಯಂತ ಆಕರ್ಷಕವಾಗಿದೆ.