ಪುತ್ತೂರು ಜಾತ್ರೆಗೂ ಕೊರೊನಾ ಎಪೆಕ್ಟ್ : ಸಾಂಪ್ರದಾಯಿಕ ಸ್ಥಿತಿಯ ಆಚರಣೆಗೆ ಸಚಿವರ ಸೂಚನೆ

ಪುತ್ತೂರು, ಎ.೪- ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪುತ್ತೂರು ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೆಯನ್ನು ಮುಂಜಾಗರೂಕತಾ ಕ್ರಮಗಳೊಂದಿಗೆ ಪೂರ್ವಶಿಷ್ಠ ಸಂಪ್ರದಾಯದಂತೆ ಎಚ್ಚರಿಕೆಯಿಂದ ನಡೆಸಬೇಕು ಎಂದು  ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

 ಶನಿವಾರ ದೇವಾಲಯದ ಆಡಳಿತ ಕಚೇರಿಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಉಪಸ್ಥಿತಿಯಲ್ಲಿ ಅವರು ವ್ಯವಸ್ಥಾಪನಾ ಸಮಿತಿಯ ಸದಸ್ಯರ ಸಭೆ ನಡೆಸಿದರು. ಪುತ್ತೂರು ಜಾತ್ರೆಯ ಸಾಂಪ್ರದಾಯಿಕ ಕ್ರಮಗಳಿಗೆ ಅಡ್ಡಿಯಾಗದಂತೆ ಭಕ್ತರ ಆಶಯದಂತೆ ಯಾವುದೇ ರೀತಿಯ ಜನಸಂದಣಿಗೆ ಅವಕಾಶವಾಗದಂತೆ ಶಿಸ್ತುಬದ್ಧವಾಗಿ ಜಾತ್ರೆ ನಡೆಸಬೇಕು. ವಾಸ್ತವ ಸ್ಥಿತಿಯನ್ನು ಅರಿತುಕೊಂಡು ಭಕ್ತರು ಕೂಡಾ ಸಹಕರಿಸಬೇಕು ಎಂದು ಸಚಿವರು ಅಭಿಪ್ರಾಯಿಸಿದರು.

ಕಳೆದ ಬಾರಿ ಪುತ್ತೂರು ಜಾತ್ರೆಯ ಸಂದರ್ಭ ಲಾಕ್‌ಡೌನ್ ಆದೇಶವಿತ್ತು. ಆದ ಕಾರಣ ಜಾತ್ರೆಯನ್ನು ದೇವಾಲಯದ ಒಳಾಂಗಣದಲ್ಲಿ ಸಾಂಕೇತಿಕವಾಗಿ ಆಚರಿಸಲಾಗಿತ್ತು. ಪುತ್ತೂರು  ಮಹಾಲಿಂಗೇಶ್ವರ ದೇವರು ದಶದಿಕ್ಕುಗಳಿಗೆ ಪೇಟೆ ಸವಾರಿ ತೆರಳಿ ಕಟ್ಟೆಪೂಜೆ ಸ್ವೀಕರಿಸುವ ಪದ್ಧತಿ ಸೀಮೆಯಲ್ಲಿ ಪಾಲನೆಯಾಗುತ್ತಿದೆ. ಕೊರೋನಾ ಮುನ್ನೆಚರಿಕೆಯನ್ನು ಗಮನದಲ್ಲಿರಿಸಿ ದೇವರ ಕಾರ್ಯಕ್ಕೆ ಚ್ಯುತಿಬಾರದಂತೆ ವಾರ್ಷಿಕ ಜಾತ್ರೆಯನ್ನು ನಡೆಸಲು ಸಿದ್ಧತೆ ಮಾಡಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಸಚಿವರಿಗೆ ವ್ಯವಸ್ಥಾಪನಾ ಸಮಿತಿಯ ಪರವಾಗಿ ಮನವರಿಕೆ ಮಾಡಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಯಾವುದೇ ರೀತಿಯಲ್ಲಿ ನಿಯಮಗಳನ್ನು ಉಲ್ಲಂಘಿಸದೆ ಕಟ್ಟುಪಾಡಿನಂತೆ ಜಾತ್ರೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ನಗರಸಭಾಧ್ಯಕ್ಷ ಕೆ. ಜೀವಂಧರ್ ಜೈನ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ,  ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಉಪಸ್ಥಿತರಿದ್ದರು.