ಪುತ್ತೂರು ಎಪಿಎಂಸಿಯಿಂದ ಅಡಿಕೆ ಬೆಳೆಗಾರರಿಗೆ ಶೂನ್ಯ ಬಡ್ಡಿ ದರದಲ್ಲಿ ಅಡಮಾನ ಸಾಲ: ಮೆದು


ಪುತ್ತೂರು, ಮೇ ೨೭- ಕೊರೊನಾ ಲಾಕ್‌ಡೌನ್ ಸಂಕಷ್ಟ ಕಾಲದಲ್ಲಿ ಪುತ್ತೂರು ಎಪಿಎಂಸಿ ಆಡಳಿತವು ಅಡಿಕೆ ಬೆಳೆಗಾರರಿಗೆ ಮತ್ತು ಊರಿನ ತರಕಾರಿ ಬೆಳೆಗಾರರಿಗೆ ಸಹಾಯವಾಗುವಂತೆ ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪುತ್ತೂರು ಶಾಸಕರ ಸೂಚನೆಯಂತೆ ಕೊರೋನಾ ೧ನೇ ಅಲೆಯ ಸಂದರ್ಭದಲ್ಲಿ ಮಾಡಿದ ರೈತ ಪರ ಯೋಜನೆಯಂತೆ ೨ನೇ ಅಲೆಯ ಸಂದರ್ಭದಲ್ಲಿಯೂ ರೈತ ಸ್ನೇಹಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಅಡಿಕೆ ಬೆಳೆಗಾರರಿಗೆ ತುರ್ತು ಹಣದ ಅವಶ್ಯಕತೆ ಇದ್ದಲ್ಲಿ ಬೆಳೆಗಾರರ ಅಡಿಕೆಯನ್ನು ಎಪಿಎಂಸಿ ಗೋದಾಮಿನಲ್ಲಿ ಅಡಮಾನ ಇರಿಸಿ, ಅಡಮಾನ ಇರಿಸಿದ ಬೆಳೆಗಾರರಿಗೆ ಶೂನ್ಯ ಬಡ್ಡಿ ದರದಲ್ಲಿ ರೂ.೨ ಲಕ್ಷದವರೆಗೆ ಮೂರು ತಿಂಗಳ ಕಾಲದ ಅಲ್ಪಾವಧಿ ಸಾಲವನ್ನು ಪುತ್ತೂರು ಎಪಿಎಂಸಿ ನೀಡುತ್ತಿದೆ. ಪ್ರತಿದಿನ ಬೆಳಗ್ಗೆ ೧೦ರಿಂದ ಸಂಜೆ ೪ರವರೆಗೆ ಈ ಸೌಲಭ್ಯವನ್ನು ಪಡೆದುಕೊಳ್ಳಲು ರೈತರಿಗೆ ಅವಕಾಶ ನೀಡಲಾಗಿದೆ ಎಂದರು.
ತರಕಾರಿ ಖರೀದಿ ವ್ಯವಸ್ಥೆ
ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿ ಸೋಮವಾರ, ಬುಧವಾರ ಮತ್ತು ಶನಿವಾರಗಳಂದು ವಾರದಲ್ಲಿ ೩ ದಿನ ಊರಿನ ತರಕಾರಿಗಳನ್ನು ಖರೀದಿ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಎಪಿಎಂಸಿ ಪ್ರಾಂಗಣದಲ್ಲಿರುವ ರಖಂ ತರಕಾರಿ ವ್ಯಾಪಾರಿಗಳು ಎಪಿಎಂಸಿ ಮಾರ್ಗದರ್ಶನದಂತೆ ಈ ವ್ಯವಸ್ಥೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ಸಂದರ್ಭದಲ್ಲಿ ಪಡಿತರದಲ್ಲಿ ವಿತರಿಸಲಿರುವ ೧೯ ಸಾವಿರ ಕ್ವಿಂಟಾಲ್ ಅಕ್ಕಿಯನ್ನು ದಾಸ್ತಾನು ಇರಿಸಲು ಎಪಿಎಂಸಿಯಲ್ಲಿ ಉಚಿತ ಗೋದಾಮು ವ್ಯವಸ್ಥೆಯನ್ನು ಮಾಡಲಾಗಿದೆ. ಸೇವಾ ಹಿನ್ನಲೆಯಲ್ಲಿ ಎಪಿಎಂಸಿ ಆಡಳಿತ ಮಂಡಳಿಯು ಈ ವ್ಯವಸ್ಥೆಯನ್ನು ಮಾಡಿದೆ ಎಂದು ಅವರು ತಿಳಿಸಿದರು.