ಪುತ್ತೂರಿನ ಶ್ರೀಧರ್ ಜ್ಯುವೆಲ್ಲರ‍್ಸ್‌ನಿಂದ ರೂ.೨೦ ಲಕ್ಷ ಮೌಲ್ಯದ ಆಭರಣ ದೋಚಿದ ಕಳ್ಳರು


ಪುತ್ತೂರು, ಮಾ.೨೬- ಪುತ್ತೂರು ನಗರಠಾಣಾ ವ್ಯಾಪ್ತಿಯ ಜ್ಯುವೆಲ್ಲರ‍್ಸ್ ಒಂದಕ್ಕೆ ಬುಧವಾರ ರಾತ್ರಿ ಕಳ್ಳರು ನುಗ್ಗಿ ಸುಮಾರು ರೂ.೨೦ ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ನಡೆದಿದೆ. ಗುರುವಾರ ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದೆ.
ಪುತ್ತೂರು ಪೇಟೆಯ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಶ್ರೀಧರ್ ಜ್ಯುವೆಲ್ಲರ‍್ಸ್ ಎಂಬ ಚಿನ್ನದಾಭರಣ ಮಾರಾಟ ಮಳಿಗೆಗೆ ಬಾಗಿಲಿನ ರೋಲಿಂಗ್ ಶೆಟರ್ ಮುರಿದು ನುಗ್ಗಿದ ಕಳ್ಳರು ಚಿನ್ನದ ಆಭರಣಗಳನ್ನು ದೋಚಿದ್ದಾರೆ. ಈ ಆಭರಣ ಮಳಿಗೆ ಹತ್ತಿರವಿರುವ ನವಮಿ ಜ್ಯುವೆಲ್ಲರ‍್ಸ್ ಹಾಗೂ ಹಿರಣ್ಯ ಮೆಷಿನ್ ಕಟ್ಟಿಂಗ್ಸ್ ಹಾಗೂ ತೃಪ್ತಿ ಜ್ಯುವೆಲ್ಲರ‍್ಸ್ ಅಂಗಡಿಗಳಲ್ಲಿಯೂ ಕಳ್ಳತನ ನಡೆಸಲು ಯತ್ನಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪುತ್ತೂರು ನಗರಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿರಂತರ ಕಳ್ಳತನ
ಪುತ್ತೂರು ನಗರವೂ ಸೇರಿದಂತೆ ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನಗಳು ನಿರಂತರವಾಗಿ ನಡೆಯುತ್ತಿದ್ದು, ಕಳ್ಳತನದ ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗುತ್ತಿದೆ. ರಾತ್ರಿ ಗಸ್ತು ಇದ್ದರೂ ಪೇಟೆಯಲ್ಲೇ ಇರುವ ಜ್ಯುವೆಲ್ಲರ‍್ಸ್ ನಲ್ಲಿ ಕಳ್ಳತನ ನಡೆಸಲಾಗಿದೆ. ಇದರ ಜತೆ ಪೇಟೆ ಸಮೀಪದ ಮನೆಗಳಲ್ಲಿಯೂ ಕಳ್ಳತನ ನಡೆದ ಪ್ರಕರಣಗಳು ವರದಿಯಾಗಿವೆ. ಕಳೆದ ಕೆಲ ತಿಂಗಳುಗಳಿಂದ ಕಳ್ಳತನದ ಪ್ರಕರಣಗಳು ಪುತ್ತೂರಿನಲ್ಲಿ ಹೆಚ್ಚಾಗುತ್ತಿದ್ದು, ಈ ಭಾಗದ ಜನತೆ ಆತಂಕ ವ್ಯಕ್ತಪಡಿಸಿದ್ದಾರೆ.