ಪುತ್ತೂರಿನಲ್ಲಿ ಕೊರೊನಾ ಜಾಗೃತಿ ಜಾಥಾ

ಪುತ್ತೂರು, ಮಾ.೨೪- ಹೆಚ್ಚುತ್ತಿರುವ ಕೊರೊನಾ ನಿಯಂತ್ರಣದ ಹಿನ್ನಲೆಯಲ್ಲಿ ಜನ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಧಿಕಾರಿಯವರ ಮೌಖಿಕ ಆದೇಶದ ಮೇರೆಗೆ ಏರ್ಪಡಿಸಲಾಗಿದ್ದ ಜಾಗೃತಿ ಜಾಥಾಕ್ಕೆ ಮಂಗಳವಾರ ನಗರದ ನೆಲ್ಲಿಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಚಾಲನೆ ನೀಡಲಾಯಿತು.

 ಜಾಥಾದಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಜಾಗೃತಿ ಫಲಕ ಹಿಡಿದು ಜನ ಜಾಗೃತಿ ಮೂಡಿಸಿದರು. ಜತೆಗೆ ವ್ಯಾಪಾರ, ವ್ಯವಹಾರಗಳ ಮಳಿಗೆ ಮತ್ತು ಸಾರ್ವಜನಿಕರಿಗೆ ಕೊರೋನಾ ಜಾಗೃತಿ ಮೂಡಿಸುವ ಕರಪತ್ರಗಳನ್ನು ಹಾಗೂ ಉಚಿತ ಮಾಸ್ಕ್‌ಗಳನ್ನು ವಿತರಿಸಿದರು.

ಪುತ್ತೂರು ನಗರಸಭಾ ಅಧ್ಯಕ್ಷ ಜೀವಂಧರ ಜೈನ್ ಮತ್ತು ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಲಸಿಕೆ ಪಡೆಯುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ದೇಶಾದ್ಯಂತ ಮತ್ತೆ ಕೊರೋನಾ ಎರಡನೇ ಅಲೆ ಹರಡುತ್ತಿದ್ದು, ಈ ಕುರಿತು ಸಾರ್ವಜನಿಕರು ನಿರ್ಲಕ್ಷ್ಯ ತಾಳದೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕಳೆದ ೪ ತಿಂಗಳಲ್ಲಿ ರಾಜ್ಯದಲ್ಲಿ ೪೦,೭೯೫ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಇದು ಆತಂಕ ಹುಟ್ಟಿಸುವ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಕೊರೋನಾ ತಡೆಗಟ್ಟುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ ಎಂದು ಜೀವಂಧರ ಜೈನ್ ತಿಳಿಸಿದರು.

ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕಲ್ಲದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಅನಗತ್ಯವಾಗಿ ಗುಂಪುಗೂಡುವುದು, ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ಆದಷ್ಟು ಕಡಿಮೆ ಮಾಡಬೇಕು ಎಂದು ಅವರು ಹೇಳಿದರು.

ತಹಶೀಲ್ದಾರ್ ರಮೇಶ್ ಬಾಬು, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ಬನ್ನೂರು ಮತ್ತಿತರ ಪ್ರಮುಖರು ಜಾಥಾದಲ್ಲಿ ಪಾಲ್ಗೊಂಡರು.

ಪುತ್ತೂರು ನಗರಸಭೆ, ಆರೋಗ್ಯ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜಾಥಾ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಏಳ್ಮುಡಿಯಲ್ಲಿ ಸಮಾಪನಗೊಂಡಿತು. ಸಮಾರೋಪದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದೀಪಕ್ ರೈ ಮಾತನಾಡಿ, ೬೦ ವರ್ಷ ಮೇಲ್ಪಟ್ಟವರು ಲಸಿಕೆ ಪಡೆದುಕೊಳ್ಳುವುದರ ಮೂಲಕ ಆರೋಗ್ಯದ ಕುರಿತು ಕಾಳಜಿ ವಹಿಸಬೇಕಾಗಿದೆ. ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸುವವರಿಗೆ ದಂಡವನ್ನೂ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದರು.