’ಪುತ್ತೂರಿಗೆ ಮೆಡಿಕಲ್ ಕಾಲೇಜ್ ಬಂದರೆ ಹೆಸರು ಶಾಶ್ವತ’

smart

ಸರ್ಕಾರಿ ಆಸ್ಪತ್ರೆಗಳನ್ನು ಉಳಿಸಿ ಹೋರಾಟ-ಧರಣಿ

ಪುತ್ತೂರು, ನ.೧೦- ಪುತ್ತೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಇರುತ್ತಿದ್ದರೆ ಸ್ವಲ್ಪಮಟ್ಟಿಗೆ ಸಮಸ್ಯೆ ಪರಿಹಾರ ಆಗಬಹುದೆಂದು ಹಿಂದಿನ ಸರ್ಕಾರ ಮೆಡಿಕಲ್ ಕಾಲೇಜ್‌ಗೆ ೪೫ ಎಕ್ರೆ ಕಾದಿರಿಸಿತ್ತು. ಈಗಿನ ಶಾಸಕರು ಆ ಜಾಗದಲ್ಲಿ ಸ್ವಲ್ಪ ಜಾಗವನ್ನು ಇತರ ಇಲಾಖೆಗೆ ನೀಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಶಾಸಕರ ಮತ್ತು ಸಂಸದರ ಹೆಸರು ಪುತ್ತೂರಿನಲ್ಲಿ ಶಾಶ್ವತವಾಗಿ ಉಳಿಯಬೇಕಾದರೆ ಮೆಡಿಕಲ್ ಕಾಲೇಜ್ ಪುತ್ತೂರಿಗೆ ತರಿಸಬೇಕು ಎಂದು ಕಾಂಗ್ರೇಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಆಗ್ರಹಿಸಿದರು.

ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ, ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ವೆನ್‌ಲಾಕ್‌ನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯಿಂದ ಸೋಮವಾರ ಪುತ್ತೂರು ಮಿನಿ ವಿಧಾನ ಸೌಧದ ಶಾಸಕರ ಕಚೇರಿ ಮುಂಭಾಗದಲ್ಲಿ ಸಮಾನಮನಸ್ಕ ಸಂಘಟನೆಗಳ ಮೂಲಕ ನಡೆದ ಸಾಮೂಹಿಕ ಧರಣಿಯಲ್ಲಿ ಅವರು ಮಾತನಾಡಿದರು.

ಡಿವೈಎಫ್‌ಐ ಕರ್ನಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಮಾತನಾಡಿ, ಜಿಲ್ಲೆಯ ೮ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಇದು ಶಾಸಕರಿಗೆ ಅವರ ಕರ್ತವ್ಯವನ್ನು ನೆನಪು ಮಾಡಿಸುವ ಕೆಲಸ ಎಂದರು. ಕಾರ್ಮಿಕರ ಸಂಘದ ನ್ಯಾಯವಾದಿ ಬಿ.ಎಂ. ಭಟ್ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಯ ಬದಲು ಕಟ್ಟಡ ಮಾತ್ರ ಇದೆ. ಅಲ್ಲಿರುವ ವೈದ್ಯರು ಸೇರಿದಂತೆ ಎಲ್ಲರೂ ಖಾಸಗಿ ಗುತ್ತಿಗೆದಾರರ ಅಡಿಯಾಳಾಗಿದ್ದಾರೆ ಎಂದು ಆರೋಪಿಸಿದರು. ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ್, ಮಧ್ಯಮ ಮತ್ತು ಬಡ ವರ್ಗದವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ತೊಂದರೆ ಆಗುತ್ತಿದೆ ಎಂದರು.

ಪೂಡಾದ ಮಾಜಿ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಡಿ, ಜೆಡಿಎಸ್ ಮುಖಂಡ ಇಬ್ರಾಹಿಂ ಗೋಳಿಕಟ್ಟೆ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಸರಕಾರಿ ಆಸ್ಪತ್ರೆ ಹೋರಾಟ ಸಮಿತಿ ಸಂಘಟಕ ಮತ್ತು ಧರಣಿ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡ ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶ್ರಫ್ ಕಲ್ಲೇಗ, ಅಂಬೇಡ್ಕರ್ ಆಪತ್ಪಾಂಧವ ಸಂಘಟನೆಯ ಅಧ್ಯಕ್ಷ ರಾಜು ಹೊಸ್ಮಠ, ಕೇಶವ ಪಡೀಲ್, ಅರ್ಷದ್ ದರ್ಬೆ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಧರ್ ಶೆಟ್ಟಿ, ನ್ಯಾಯವಾದಿ ಪಿ.ಕೆ. ಸತೀಶನ್ ಉಪಸ್ಥಿತರಿದ್ದರು.