‘ಪುಣ್ಯ ಕರ್ಪೂರ’ ಕೃತಿ ಬಿಡುಗಡೆ

ಬೀದರ್:ಜ.9: ಸಾಹಿತ್ತಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಅವರ ಕೊಡುಗೆ ಅಪಾರವಾಗಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ನುಡಿದರು.

ಕುವೆಂಪು ಕನ್ನಡ ಸಂಘದ ವತಿಯಿಂದ ನಗರದ ಕುಂಬಾರವಾಡದಲ್ಲಿ ನಡೆದ ಪಂಚಾಕ್ಷರಿ ಪುಣ್ಯಶೆಟ್ಟಿ ರಚಿತ ‘ಪುಣ್ಯ ಕರ್ಪೂರ’ ಕೃತಿ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಪುಣ್ಯಶೆಟ್ಟಿ ಕನ್ನಡದ ಕಟ್ಟಾಳು ಆಗಿದ್ದಾರೆ. ನಿರ್ಭಿಡೆ ವ್ಯಕ್ತಿತ್ವ ಹೊಂದಿದ್ದಾರೆ. ಮಾತೃ ಹೃದಯಿ ಕೂಡ ಆಗಿದ್ದಾರೆ. ಅಂತೆಯೇ ತಮ್ಮ ಮೊಮ್ಮಗಳು ರತಿಕಾಳ ಜೀವನಗಾಥೆ ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಣ್ಣಿಸಿದರು.

ಶರಣ ತತ್ವ ಪರಿಪಾಲಕರಾಗಿರುವ ಪುಣ್ಯಶೆಟ್ಟಿ ಅವರಿಂದ ಇನ್ನೂ ಅನೇಕ ಮೌಲಿಕ ಕೃತಿಗಳು ಹೊರ ಬರಲಿ ಎಂದು ಆಶಿಸಿದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ಪದವಿ ಕಾಲೇಜು ಪ್ರಾಚಾರ್ಯ ಡಾ. ಜಗನ್ನಾಥ ಹೆಬ್ಬಾಳೆ ಅವರು, ಕರ್ಪೂರ ಮನೆತನ ಬೀದರ್‍ನ ಹೆಸರಾಂತ ಮನೆತನಗಳಲ್ಲಿ ಒಂದಾಗಿದೆ. ಈ ಮನೆತನದ ಅಳಿಯನಾದ ಪುಣ್ಯಶೆಟ್ಟಿ ಅವರು ಗೌರವಯುತ ಜೀವನ ನಡೆಸಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಮಾಣಿಕಪ್ಪ ಕರ್ಪೂರ ಅವರಂತಹ ಆದರ್ಶ ವ್ಯಕ್ತಿಯ ಜೀವನ ಚರಿತ್ರೆ ಹೊರ ಬರುವುದು ಅಗತ್ಯವಾಗಿತ್ತು. ಪುಣ್ಯಶೆಟ್ಟಿ ಅವರು ಈ ಮಹತ್ವದ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಣಿಕಪ್ಪ ಹಾಗೂ ನಾಗಶೆಟ್ಟೆಪ್ಪ ಸಹೋದರರ ಜೀವನ ಅನುಕರಣೀಯವಾಗಿದೆ. ಈಗಿನ ಕಾಲದಲ್ಲಿ ಅಂತಹ ಅಣ್ಣ-ತಮ್ಮಂದಿರು ಸಿಗುವುದು ಅಪರೂಪ. ಕಾಯ ಅಳಿದರೂ ಅವರ ಕಾರ್ಯಗಳು ಉಳಿದುಕೊಂಡಿವೆ ಎಂದು ತಿಳಿಸಿದರು.

ಸಾಹಿತಿ ಶ್ರೀದೇವಿ ಹೂಗಾರ ಕೃತಿ ಪರಿಚಯ ಮಾಡಿಕೊಟ್ಟರು. ಚಿತ್ರ ಕಲಾವಿದ ಬಿ.ಕೆ. ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ಭಾಲ್ಕಿ ಹಿರೇಮಠದ ಜಯದೇವ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿಗಳಾದ ಡಾ. ಬಸವರಾಜ ಬಲ್ಲೂರ, ರಾಜಕುಮಾರ ಹೆಬ್ಬಾಳೆ, ಡಾ. ರಘುಶಂಖ ಭಾತಂಬ್ರಾ, ಡಾ. ರಾಮಚಂದ್ರ ಗಣಾಪುರ, ಕಲ್ಯಾಣರಾವ್ ಚಳಕಾಪುರೆ, ದೇವೇಂದ್ರ ಕರಂಜೆ, ಜಗನ್ನಾಥ ಕಮಲಾಪುರೆ, ಪ್ರಕಾಶ ಕನ್ನಾಳೆ, ಡಾ. ಮಲ್ಲಪ್ಪ ಕರ್ಪೂರ, ಡಾ.ಸುಭಾಷ ಕರ್ಪೂರ, ಶರಣಪ್ಪ ಕರ್ಪೂರ, ನಿತಿನ್ ಕರ್ಪೂರ, ನಾಗರಾಜ ಕರ್ಪೂರ, ಭರತ ಪುಣ್ಯಶೆಟ್ಟಿ, ಸುಮೀತ್ ಪುಣ್ಯಶೆಟ್ಟಿ ಇದ್ದರು.

ಸಂಗಮೇಶ ಜ್ಯಾಂತೆ ಸ್ವಾಗತಿಸಿದರು. ಡಾ. ಚಂದ್ರಪ್ಪ ಭತಮುರ್ಗೆ ನಿರೂಪಿಸಿದರು.