ಪುಣ್ಯಸ್ಮರಣೋತ್ಸವ: ಧರ್ಮ ಸಮಾರಂಭ

ನರೇಗಲ್ಲ,ಸೆ19 : ಮಾನವ ಜೀವನ ಭಗವಂತ ಕೊಟ್ಟ ಅಮೂಲ್ಯ ಕೊಡುಗೆ. ಅರಿತು ಬಾಳಿದರೆ ಬಾಳು ಬಂಗಾರವಾಗುತ್ತದೆ. ಉಸಿರು ನಿಂತರೂ ಹೆಸರು ಉಳಿಯುವದು ಸತ್ಕಾರ್ಯಗಳಿಂದ ಜೀವನ ಸಾರ್ಥಕವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಸಮೀಪದ ಅಬ್ಬಿಗೇರಿ ಹಿರೇಮಠದಲ್ಲಿ ಜರುಗಿದ ಲಿಂ. ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳವರ ದ್ವಿತೀಯ ವರ್ಷದ ಪುಣ್ಯಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಏನೂ ಅರ್ಥವಾಗದೇ ಇರುವಾಗ ಜೀವನ ಪ್ರಾರಂಭಗೊಳ್ಳುತ್ತದೆ. ಎಲ್ಲಾ ಅರ್ಥವಾಗುವಾಗ ಜೀವನ ಮುಗಿದೇ ಹೋಗುತ್ತದೆ. ಆದರೆ ಮಾಡಿದ ಸತ್ಕಾರ್ಯಗಳು ಮಾತ್ರ ನೆನಪು ಉಳಿಯುತ್ತವೆ. ಮನುಷ್ಯನನ್ನು ನಂಬಿ ಬೀದಿಗೆ ಬಂದವರೆಷ್ಟೋ ಜನ. ಆದರೆ ದುಡಿಮೆ ನಂಬಿ ನಡೆದವರು ಯಾರೂ ಬೀದಿಗೆ ಬಂದಿಲ್ಲ. ಜೀವನದಲ್ಲಿ ಅನೇಕ ತಿರುವುಗಳು ಬರುತ್ತವೆ. ಅವೆಲ್ಲವುಗಳನ್ನು ದಾಟಿ ನಡೆಯುವುದೇ ಜೀವನದ ದಾರಿ. ಲಿಂ. ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು ಆದರ್ಶ ವ್ಯಕ್ತಿತ್ವ ಹೊಂದಿ ಜನಮಾನಸದಲ್ಲಿ ಉಳಿದ ಶ್ರೇಷ್ಠ ಶಿವಾಚಾರ್ಯರಾಗಿದ್ದರು. ಧರ್ಮಮುಖಿಯಾಗಿ ಮತ್ತು ಸಮಾಜ ಮುಖಿಯಾಗಿ ಹಲವು ಹತ್ತು ಕಾರ್ಯಗಳನ್ನು ನಿರ್ವಹಿಸಿದ ಶ್ರೇಯಸ್ಸು ಶ್ರೀಗಳವರಿಗೆ ಸಲ್ಲುತ್ತದೆ ಎಂದರು.

ಮುಕ್ತಿಮಂದಿರ ಧರ್ಮಕ್ಷೇತ್ರದ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯರು ಧರ್ಮ ಸಮಾರಂಭ ಉದ್ಘಾಟಿಸಿ ಲಿಂ. ಸೋಮಶೇಖರ ಶ್ರೀಗಳವರ ಜೀವನದ ಸಿದ್ಧಿ ಸಾಧನೆಗಳ ಬಗೆಗೆ ಮಾತನಾಡಿದರು. ಸಿದ್ಧರಬೆಟ್ಟ ಕ್ಷೇತ್ರ ಮತ್ತು ಅಬ್ಬಿಗೇರಿ ಹಿರೇಮಠದ ವೀರಭದ್ರ ಶಿವಾಚಾರ್ಯರು ಮಾತನಾಡಿ ಕಷ್ಟದ ಜೀವನ ಶಿಸ್ತನ್ನು ಕಲಿಸುವ ಪಾಠಶಾಲೆ. ಲಿಂ. ಶ್ರೀಗಳು ಕಷ್ಟಸಹಿಷ್ಣುಗಳಾಗಿ ಧರ್ಮ-ಸಂಸ್ಕøತಿ ಬೆಳೆಸಿದ್ದನ್ನು ಮರೆಯಲಾಗದೆಂದರು.

ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಯಲಬುರ್ಗಾ ಬಸವಲಿಂಗ ಶಿವಾಚಾರ್ಯರು, ಚಳಗೇರಿ ವೀರಸಂಗಮೇಶ್ವರ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು ಸಮಾರಂಭದಲ್ಲಿ ಪಾಲ್ಗೊಂಡು ನುಡಿನಮನ ಸಲ್ಲಿಸಿದರು. ಈ ಧರ್ಮ ಸಮಾರಂಭದಲ್ಲಿ ಕ್ಷೇತ್ರದ ಮಾಜಿ ಶಾಸಕ ಜಿ.ಎಸ್. ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಖಾ ವೀರಾಪೂರ ಸೇರಿದಂತೆ ರಾಜಕೀಯ ಧುರೀಣರು ಮತ್ತು ಗಣ್ಯರು ಪಾಲ್ಗೊಂಡಿದ್ದರು.

ಪ್ರಾತಃಕಾಲ ಶ್ರೀಮಠದ ಗದ್ದುಗೆಗಳಿಗೆ ರುದ್ರಾಭಿಷೇಕ, ಅಷ್ಟೋತ್ತರ ಮಹಾಮಂಗಲ ಜರುಗಿ ಗ್ರಾಮದಲ್ಲಿ ಪಲ್ಲಕ್ಕಿ ಮಹೋತ್ಸವ ನಡೆಯಿತು. ಸಮಾರಂಭದ ನಂತರ ಆಗಮಿಸಿದ ಸಕಲ ಸದ್ಭಕ್ತರಿಗೆ ಅನ್ನದಾಸೋಹ ಜರುಗಿತು.