ಪುಣ್ಯಭೂಮಿ ಅವಹೇಳನ ಅಕ್ಷಮ್ಯ: ಸ್ಮøತಿ ಇರಾನಿ

ಲಕ್ಷ್ಮೇಶ್ವರ,ಮಾ17: ಭಾರತ ಪುಣ್ಯಭೂಮಿ ಜನ್ಮನೀಡಿದ ತಾಯಿಯಷ್ಟೇ ಪವಿತ್ರಳು ಎಂಬ ಬಲವಾದ ನಂಬಿಕೆ ಪ್ರತಿಯೊಬ್ಬ ಭಾರತೀಯರದ್ದಾಗಿದೆ. ಆದರೆ ವಿದೇಶಿ ನೆಲದಲ್ಲಿ ನಮ್ಮ ಪುಣ್ಯಭೂಮಿಯ ಬಗ್ಗೆ ಅವಹೇಳಕಾರಿ ಮಾತನಾಡಿದ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಯನ್ನು ಈ ದೇಶದ ಜನ ಎಂದಿಗೂ ಕ್ಷಮಿಸುವುದಿಲ್ಲ…ಸಹಿಸುವುದಿಲ್ಲ ಎಂದು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಸ್ಮøತಿ ಇರಾನಿ ಹೇಳಿದರು.
ಅವರು ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ವಿಜಯ ಸಂಕಲ್ಪ ಯಾತ್ರೆಯ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸೋನಿಯಾ ಗಾಂಧಿ ಅವರು ತಮ್ಮ ಮಗನಿಗೆ ದೇಶದ ಬಗ್ಗೆ ಗೌರವ, ಅಭಿಮಾನ ಮತ್ತು ಸಂಸ್ಕಾರವನ್ನು ಕಲಿಸದಿರುವುದು ಕಾರಣ. ವಿಶ್ವಮಾನ್ಯ ಭಾರತದ ಸಂವಿಧಾನ ಉಳಿಯಬೇಕಾದರೆ ಭಾರತೀಯ ಜನತಾ ಪಕ್ಷ ಒಂದೇ ದೇಶದ ಜನತೆಗೆ ಭರವಸೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಕಾರ್ಯಕರ್ತರಲ್ಲಿ ಪ್ರೇರಣೆ ನೀಡಿ ಕೋವಿಡ್ ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರಿಗೆ ಆಹಾರ, ಆರೋಗ್ಯ ವ್ಯವಸ್ಥೆ ಕಲ್ಪಿಸಿ ದೇಶದ ಜನರಿಗೆ ಶ್ರೀರಕ್ಷೆಯಾಗಿ ನಿಂತರು ಎಂದರು.
ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿ ಕಿಸಾನ್ ಸಮ್ಮಾನ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಒಟ್ಟು 10 ಸಾವಿರ ನೀಡುವ ಮೂಲಕ ರೈತರಿಗೆ ಆಸರೆಯಾಗಿದೆ. ಮುದ್ರಾ ಯೋಜನೆಯಡಿ ಎಲ್ಲ ವರ್ಗದವರ ನಿರೂದ್ಯೋಗ ನಿವಾರಣೆಗಾಗಿ ಸ್ವಯಂ ಉದ್ಯೋಗಕ್ಕಾಗಿ ಬ್ಯಾಂಕುಗಳ ಮೂಲಕ ಕೋಟ್ಯಾಂತರ ರೂ ನೆರವು ನೀಡಿದೆ. ಪ್ರತಿ ಹಳ್ಳಿ, ಮಂಡಲ, ಜಿಲ್ಲೆ, ರಾಜ್ಯ ಸಶಕ್ತವಾದರೆ ದೇಶದ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ ಎಂಬುದನ್ನು ತಿಳಿಸುವುದು ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ವಿಜಯ ಸಂಕಲ್ಪ ಯಾತ್ರೆಯು ಪಕ್ಷದ ಗೆಲುವಿನ ಅಭಿಯಾನವೇ ಆಗಿದೆ ಎಂದು ಅವರು ಹೇಳಿದರು.
ದೇಶ ಮತ್ತು ರಾಜ್ಯದಲ್ಲಿ ಮತ್ತೇ ಡಬಲ್ ಎಂಜಿನ್ ಸರ್ಕಾರ ರಚನೆ ಶತಸಿದ್ಧ. ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೇ ಕಮಲ ಅರಳಿಸುವಲ್ಲಿ ಎಲ್ಲರೂ ಕೈ ಜೋಡಿಸಿ ಮೋದಿ ಅವರ ಕೈ ಬಲಪಡಿಸಬೇಕು ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಡಬಲ್ ಇಂಜಿನ್ ಸರ್ಕಾರ ಜನಯೋಜನೆಗಳು ದೇಶದ ಜನರಲ್ಲಿ ಭರವಸೆ ಮೂಡಿಸಿದೆ. ಕಾಂಗ್ರೇಸ್ ಪಕ್ಷ ಏನೇ ಗ್ಯಾರಂಟಿ ಕೊಡುತ್ತೇವೆಂದರೂ ಮತದಾರರು ನರೇಂದ್ರ ಮೋದಿ ಸರ್ಕಾರವನ್ನು ಬಿಟ್ಟುಕೊಡುವುದಿಲ್ಲ. ವಿದೇಶಿ ನೆಲದಲ್ಲಿ ದೇಶವನ್ನು ಮಾಡಿದ ಅವಹೇಳನಕ್ಕೆ ಕ್ಷಮೆ ಕೇಳಬೇಕು. ಮೋದಿ ನಿಂದಿಸಿದಷ್ಟು ಬಿಜೆಪಿ ಶಕ್ತಿ ಹೆಚ್ಚಲಿದೆ ಎಂದರು.
ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಪಕ್ಷದ ಕಾರ್ಯಕರ್ತರೇ ನನ್ನ ಶಕ್ತಿ ಮತ್ತು ಇಲ್ಲಿನ ಮತದಾರರ ಆಶೀರ್ವಾದ ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಿದೆ. ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯನ್ನು ಸೋಲಿಸಿದ ಸ್ಮøತಿ ಇರಾನಿ ಕ್ಷೇತ್ರಕ್ಕೆ ಆಗಮಿಸಿದ್ದು ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ ಎಂದರು.
ಜಿಲ್ಲಾಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ಶಿರಹಟ್ಟಿ ಮಂಡಲದ ಅಧ್ಯಕ್ಷ ಫಕ್ಕೀರೆಶ ರಟ್ಟಿಹಳ್ಳಿ, ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗೀರೀಶ ಹಾವಿನಾಳ, ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ, ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ರಾಜ್ಯ ಕಾರ್ಯದರ್ಶಿ ಭಾರತಿ ಮುಗುದಮ್, ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳಿಕಾಯಿ, ವಿಜಯ ಸಂಕಲ್ಪ ಯಾತ್ರೆಯ ಜಿಲ್ಲಾ ಸಂಚಾಲಕ ಶಶಿಧರ ದಿಂಡೂರ, ಭೀಮಸಿಂಗ್ ರಾಠೋಡ, ಮುಂಡರಗಿ ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ, ಲಕ್ಷ್ಮೇಶ್ವರ ಪುರಸಭೆ ಉಪಾಧ್ಯಕ್ಷೆ ಪೂಜಾ ಖರಾಟೆ, ರವಿ ದಂಡಿನ, ಈರವ್ವ ರಾಮಣ್ಣ ಲಮಾಣಿ, ಅಶ್ವಿನಿ ಅಂಕಲಕೋಟಿ, ಗುರುನಾಥ ದಾನಪ್ಪನವರ, ಉಷಾ ದಾಸರ, ಬಿಜೆಪಿ ಶಿರಹಟ್ಟಿ ಮಂಡಲದ ಪ್ರಧಾನ ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ, ನಗರ ಘಟಕದ ಅಧ್ಯಕ್ಷ ದುಂಡೇಶ ಕೊಟಗಿ ಸೇರಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ನಾಗರಾಜ ಕುಲಕರ್ಣಿ ನಿರೂಪಿಸಿದರು.