ಪುಣೆಯಲ್ಲಿ ಆ. 29ರಂದು ಜನ ಸ್ವರಾಜ್ಯ ಯಾತ್ರಾ ಮಿಷನ್ ಬೃಹತ್ ಸಮಾವೇಶ

ಕಲಬುರಗಿ,ಆ.18: ರಾಷ್ಟ್ರೀಯ ಸಮಾಜ ಪಕ್ಷ (ಆರ್‍ಎಸ್‍ಪಿ) ರಾಜ್ಯ ಘಟಕದಿಂದ ಪಕ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಗಸ್ಟ್ 29ರಂದು ಜನ ಸ್ವರಾಜ್ ಯಾತ್ರಾ ಮಿಷನ್ -2024 ಜರುಗಲಿದೆ ಎಂದು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಿವಲಿಂಗಪ್ಪ ಕಿನ್ನೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 26ರಂದು ಬೆಳಿಗ್ಗೆ 11-30ಕ್ಕೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿ, ಬಸವಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಿದ ನಂತರ ನಗರದಿಂದ ಸುಮಾರು 1000ಕ್ಕೂ ಹೆಚ್ಚು ಜನ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯಾದ್ಯಂತ ಸುಮಾರು, 5000ಕ್ಕೂ ಹೆಚ್ಚು ಜನ ಭಾಗವಹಿಸುವರು ಎಂದರು.
ಜನರಿಂದ ಜನರಿಗಾಗಿ, ಜನರಿಗೋಸ್ಕರ ಜನ ಸ್ವರಾಜ್ಯ ನಿರ್ಮಾಣಕ್ಕೆ ಆರ್‍ಎಸ್‍ಪಿ ಪಕ್ಷವು ನಗರದ ಮಾರ್ಗವಾಗಿ ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ- ಧಾರವಾಡ ಹಾಗೂ ಬೆಳಗಾವಿಯ ನಂದಗಡವರೆಗೂ ಯಾತ್ರೆ ತೆರಳಲಿದೆ. ಮಾರ್ಗ ಮಧ್ಯೆ ಬರುವ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಬಹಿರಂಗ ಸಭೆ ಮಾಡಿ, ಆಗಸ್ಟ್ 29ರಂದು ಪುಣೆಯಲ್ಲಿ ಬೃಹತ್ ಸಮಾವೇಶ ಜರುಗಲಿದೆ. ಸಮಾವೇಶದಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಜನರು ಸೇರುವರು ಎಂದು ಅವರು ಹೇಳಿದರು.
ರಾಜ್ಯದ ಹಿಂದುಳಿದ ವರ್ಗಗಳ ಜನರ ಓಬಿಸಿ, ಎಂಬಿಸಿ ಸಮೀಕ್ಷಾ ವರದಿಗಳನ್ನು ಬಿಡುಗಡೆ ಮಾಡಿ ಶ್ವೇತಪತ್ರ ಹೊರಡಿಸುವಂತೆ, ಓಬಿಸಿ ಮತ್ತು ಎಂಬಿಸಿ ಬಡವರ ಮನೆ ಆಶ್ರಯ ಒದಗಿಸುವಂತೆ, ನಿರುದ್ಯೋಗ ನಿವಾರಣೆಗೆ ಕೌಶಲ ತರಬೇತಿ ನೀಡಿ ಸರಳ ಸಾಲ ಸೌಲಭ್ಯ ನೀಡುವಂತೆ, ದೇಶದ ಕೈಗಾರಿಕೆ ಕಾರ್ಮಿಕರಿಗೆ ಸಮಾನ ಸೌಲಭ್ಯ ಒದಗಿಸುವಂತೆ, ಕಲ್ಯಾಣ ಕರ್ನಾಟಕದ 371(ಜೆ) ಮೀಸಲಾತಿ ಅನ್ವಯ ಓಬಿಸಿ ಮತ್ತು ಎಂಬಿಸಿ ರೋಸ್ಟರ್ ಪದ್ದತಿಯಲ್ಲಿ ಅನ್ಯಾಯವಾಗಿದ್ದು, ಕೂಡಲೇ ಅದನ್ನು ಸರಿಪಡಿಸುವಂತೆ ಅವರು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ವ್ಯಾಪ್ತಿಯಲ್ಲಿನ ಎಲ್ಲ ಗ್ರಾಮಗಳಿಗೂ ಸಮರ್ಪಕ ಅನುದಾನ ನೀಡುವಂತೆ, ಈ ಭಾಗದ ಯುವಕರಿಗೆ ಉದ್ಯೋಗ ಕೌಶಲ ತರಬೇತಿ, ಮಹಿಳೆಯರಿಗೆ ಶೌಚಾಲಯ ಕಟ್ಟಡಗಳ ನಿರ್ಮಾಣ, ಸಮರ್ಪಕ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಎ. ಪೂಜಾರಿ, ಧರ್ಮಣ್ಣ ತೊಂಟಾಪೂರ್, ಶರಣಬಸಪ್ಪ ದೊಡ್ಡಮನಿ, ದೇವೆಂದ್ರಪ್ಪ ಕ್ಯಾಶಪಳ್ಳಿ, ಭೀಮಣ್ಣ ಕಟ್ಟಿಮನಿ, ಶ್ರೀಮಂತ್ ಮಾವನೂರ್, ಮಹಾಂತಪ್ಪ ಜೇವರ್ಗಿ, ರಮೇಶ್ ಮುಂತಾದವರು ಉಪಸ್ಥಿತರಿದ್ದರು.