ಪುಡಿ ರೌಡಿ ದರ್ಪ: ದೇವಲ್ ಗಾಣಗಾಪುರ ಠಾಣೆ ಪಿಎಸ್‍ಐ ಅಯ್ಯಣ್ಣ ಅಮಾನತ್ತು

ಕಲಬುರಗಿ.ಮೇ.31:ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ದೇವಲ್ ಗಾಣಗಾಪುರದ ಸಂಗಮ್ ಕ್ಷೇತ್ರದಲ್ಲಿ ಭಕ್ತರೊಬ್ಬರ ಮೇಲೆ ಪುಡಿರೌಡಿಯೊಬ್ಬ ಕಾಲಿಟ್ಟು ದರ್ಪ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದಡಿ ದೇವಲ್ ಗಾಣಗಾಪೂರ್ ಪೋಲಿಸ್ ಠಾಣೆಯ ಪಿಎಸ್‍ಐ ಅಯ್ಯಣ್ಣ ಅವರಿಗೆ ಅಮಾನತ್ತು ಮಾಡಿ ಈಶಾನ್ಯ ವಲಯ ಪೋಲಿಸ್ ಮಹಾನಿರೀಕ್ಷಕ ಅನುಪಮ್ ಅಗರವಾಲ್ ಅವರು ಆದೇಶ ಹೊರಡಿಸಿದ್ದಾರೆ.
ದತ್ತಾತ್ರೇಯ್ ಸಂಗಮ್ ದೇವಸ್ಥಾನದಲ್ಲಿ ಪುಡಿ ರೌಡಿ ಯಲ್ಲಪ್ಪ ಕಲ್ಲೂರ್ ಎಂಬಾತನು ಭಕ್ತರ ಮೇಲೆ ಅಟ್ಟಹಾಸ ಮೆರೆದಿದ್ದ. ಹಲ್ಲೆ ಮಾಡಿ ತಲೆ ಮೇಲೆ ಕಾಲಿಟ್ಟು ದೌರ್ಜನ್ಯ ಹಾಗೂ ದರ್ಪ ಮೆರೆದಿದ್ದ. ಆತ ಮುಂಚೆಯೂ ಸಹ ಅದೇ ರೀತಿ ವರ್ತಿಸಿದ್ದ. ಆ ಕುರಿತು ಪ್ರಕರಣ ಸಹ ದಾಖಲಾಗಿದ್ದವು.
ಭಕ್ತರ ಮೇಲೆ ದೌರ್ಜನ್ಯ ಮೆರೆದ ಪುಡಿ ರೌಡಿಯ ಮೇಲೆ ಕ್ರಮ ಕೈಗೊಳ್ಳುವಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಪಿಎಸ್‍ಐ ಅಯ್ಯಣ್ಣ ಅವರಿಗೆ ಅಮಾನತ್ತು ಮಾಡಲಾಗಿದೆ. ದತ್ತನ ಭಕ್ತರ ತಲೆ ಮೇಲೆ ಕಾಲು ಇಟ್ಟು ಹಲ್ಲೆ ಮಾಡಿದಾಗ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಮೇಲಾಧಿಕಾರಿಗಳ ಗಮನಕ್ಕೂ ತಂದಿರಲಿಲ್ಲ. ಮಾಧ್ಯಮದಲ್ಲಿ ವರದಿ ಬಂದ ಮೇಲೆ ಯಲ್ಲಪ್ಪನಿಗೆ ಬಂಧಿಸಲಾಗಿತ್ತು. ಮೇಲಾಧಿಕಾರಿಗಳಿಗೂ ಸಹ ಮಾಹಿತಿಯನ್ನು ನೀಡದೇ ಕರ್ತವ್ಯಲೋಪ ಎಸಗಿದ ಹಿನ್ನೆಲೆಯಲ್ಲಿ ಪಿಎಸ್‍ಐ ಅಯ್ಯಣ್ಣ ಅವರಿಗೆ ಅಮಾನತ್ತು ಮಾಡಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಗಾಣಗಾಪುರದ ದತ್ತಾತ್ರೇಯ್ ದೇವಸ್ಥಾನದಲ್ಲಿ ಭಕ್ತರ ಮೇಲೆ ಪುಡಿರೌಡಿಯೊಬ್ಬ ಅಟ್ಟಹಾಸ ಮೆರೆದ ಘಟನೆ ವರದಿಯಾಗಿತ್ತು. ಭಕ್ತರ ತಲೆಯ ಮೇಲೆ ಕಾಲು ಇಟ್ಟು ದರ್ಪ ತೋರಿದ್ದ. ದೇಶದ ಮೂಲೆ, ಮೂಲೆಗಳಿಂದ ಭಕ್ತರು ಗಾಣಗಾಪುರ ದೇವಸ್ಥಾನಕ್ಕೆ ಬರುವುದರಿಂದ ಭಕ್ತರು ದೇವಸ್ಥಾನದಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಹೀಗೆ ದೇವಸ್ಥಾನದಲ್ಲಿ ರಾತ್ರಿ ವೇಳೆ ಮಲಗಿದ್ದ ಭಕ್ತರ ಮೇಲೆ ಸ್ಥಳೀಯ ನಿವಾಸಿ ಯಲ್ಲಪ್ಪ ಕಲ್ಲೂರ್ ಎಂಬಾತ ದಬ್ಬಾಳಿಕೆ ಮಾಡಿದ್ದ. ಅಷ್ಟೇ ಅಲ್ಲದೇ ಭಕ್ತರಿಗೆ ಅವಾಚ್ಯ ಪದಗಳಿಂದ ನಿಂದಿಸಿ ತಲೆ ಮೇಲೆ ಕಾಲಿಟ್ಟು ಹಲ್ಲೆ ಕೂಡ ಮಾಡಿದ್ದ.
ಇದಷ್ಟೇ ಅಲ್ಲದೇ ದೇವಸ್ಥಾನದ ಸಂಗಮ್ ಸ್ಥಳದಲ್ಲಿರುವ ಔದುಂಬರ ವೃಕ್ಷದ ಕೆಳಗೆ ದತ್ತ ಚರಿತ್ರೆ ಪಾರಾಯಣ ಮಾಡುತ್ತಿದ್ದ ಭಕ್ತರ ಮೇಲೂ ಅಟ್ಟಹಾಸ ಮೆರೆದಿದ್ದ. ಆ ಕುರಿತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಆಗ ಪೋಲಿಸರು ಕ್ರಮ ಕೈಗೊಂಡಿದ್ದರು. ಪುಡಿ ರೌಡಿಯನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದರು. ಆತ ಇದೇ ಮೊದಲಲ್ಲ. ಕಳೆದ ಕೆಲವು ವರ್ಷಗಳಿಂದ ಗಾಣಗಾಪೂರ್ ದೇವಸ್ಥಾನಕ್ಕೆ ಬರುವ ಭಕ್ತರ ಮೇಲೆ ದೌರ್ಜನ್ಯ ಎಸಗುತ್ತಲೇ ಬಂದಿದ್ದ. ಆದಾಗ್ಯೂ, ಆತನ ವಿರುದ್ಧ ಸ್ಥಳೀಯ ಪೋಲಿಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದರು.