ಪುಟ್ಬಾಲ್ ಆಡಲು ದಿವಾಕರಬಾಬು ರೆಡಿ‌


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.01: ಕಳೆದ ಹಲವು ದಿನಗಳಿಂದ ಹೊಗೆಯಾಡುತ್ತಿದ್ದ ವಿಷಯ ಇಂದು ಬಹಿರಂಗಗೊಂಡಿದೆ. ನಗರದ ರೂಪನಗುಡಿ ರಸ್ತೆಯ ಅಂಜಿನಪ್ಪ ಜಿನ್ನದಲ್ಲಿ ಈ ಬೆಳವಣಿಗೆಯಾಗಿದೆ. ಮಾಜಿ ಸಚಿವ ಎಂ.ದಿವಾಕರಬಾಬು ಇದರ ಕೇಂದ್ರ ಬಿಂದುವಾಗಿದ್ದಾರೆ.
ಸಂಜೆವಾಣಿ ಜೊತೆ ಮಾತನಾಡಿದ ದಿವಾಕರಬಾಬು ಅವರು. ನಗರದ ಕಾಂಗ್ರೆಸ್ ಅಭ್ಯರ್ಥಿ ಭರತ್ ರೆಡ್ಡಿ ಮತ್ತು ಅವರ ತಂದೆ ಸೂರ್ಯ ನಾರಾಯಣ ರೆಡ್ಡಿ ಅವರು ನಮ್ಮ ಅವಶ್ಯಕತೆ ಇಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ.  ಜೊತೆಗೆ ನಮ್ಮೊಂದಿಗಿರುವ  ಪಕ್ಷದ ನೈಜ ಕಾರ್ಯಕರ್ತರನ್ನು ದೂರ ಇಟ್ಟು ಚುನಾವಣೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಅದಕ್ಕಾಗಿ  ಇಷ್ಟು ದಿನ ಪಕ್ಷಕ್ಕೆ ದುಡಿದ ಕಾರ್ಯಕರ್ತರು  ಬೇಸರಗೊಂಡಿದ್ದು ಅವರನ್ನು ಸಮಾಧಾನ ಪಡಿಸುವುದು ನನಗೆ ಕಷ್ಟದ ಕೆಲಸ ಆಗಿದೆ. ನಾನಂತೂ  ಚುನಾವಣೆ ಎಂಬ ಮೈದಾನದಲ್ಲಿ ಫುಟ್ ಬಾಲ್ ಆಡಲು ನಿರ್ಧರಿಸಿದ್ದೇನೆ. ಕಾರ್ಯಕರ್ತರು ನನ್ನ ತಂಡದ ಸಹ ಆಟಗಾರರಾಗಿರುತ್ತಾರೆ.  ಅಡುವವರು ನನ್ನೊಂದಿಗೆ ಆಡಬಹುದು. ಇಷ್ಟ ಇಲ್ಲದವರು ತಮ್ಮ ದಾರಿ ತಾವು ನೋಡಿಕೊಳ್ಳುತ್ತಾರೆ. ಅವರನ್ನು ಹೀಗೆ ಮಾಡಿ ಎಂದು ಹೇಳಲ್ಲ ಎಂದಿದ್ದಾರೆ.
ಚುನಾವಣೆಗೆ  ಇನ್ನೇನು ಕೆಲ ದಿನಗಳು ಮಾತ್ರ  ಬಾಕಿ ಇರುವಾಗ  ಈ ಬೆಳವಣಿಗೆ ನಗರದ ಕಾಂಗ್ರೆಸ್‌ನಲ್ಲಿ ಭಿನ್ನ ಮತ ಸ್ಫೋಟಕ್ಕೆ ಕಾರಣವಾಗಿದೆ ಎನ್ನಬಹುದು.
ದಿವಾಕರ್ ಬಾಬು ಅವರು   ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡದೆ ಇರಲು ನಿರ್ಧರಿಸಿದ್ದಾರಂತೆ. ಈ ಹಿಂದೆ ಪಕ್ಷ ನನ್ನ ಅಳಿಯನಿಗೆ ಟಿಕೆಟ್ ನೀಡಿದರೂ ಆತನ ಗೆಲುವಿಗೆ ಶ್ರಮಿಸುತ್ತೆನೆ ಎಂಬ ಹೇಳಿಕೆ ಬಗ್ಗೆ ಪ್ರಶ್ನಿಸಿದರೆ. ಪಕ್ಷದ ಸಂಘಟನೆ, ಜನಸೇವೆ ಮಾಡಿ ಟಿಕೆಟ್ ತಂದಿದ್ದರೆ ಆ ಮಾತು, ಅದು ಬಿಟ್ಟು ಲಕ್ಷ್ಮಿ ಮಾರ್ಗದಿಂದ ತಂದರೆ, ನಮ್ಮಂತಹ ಬಡವರು, ಪಕ್ಷಕ್ಕೆ ದುಡಿದವರು ಎಲ್ಲಿಗೆ ಹೋಗಬೇಕು ಎಂಬ ಮಾತು ಕೇಳಿ ಬಂತು.
ಒಟ್ಟಾರೆ ಪರೋಕ್ಷವಾಗಿ  ಕೆ ಆರ್ ಪಿ ಪಿ ಪಕ್ಷದ ಅಭ್ಯರ್ಥಿ ಲಕ್ಷ್ಮಿ ಅರುಣ ಅವರ ಪರ ಕೆಲಸ ಮಾಡುವ ರೀತಿ ಮಾತನಾಡಿದ್ದಾರೆ. ಮುಂದಿನ ದಿನಗಳು ಏನೇನು ಬೆಳವಣಿಗೆ ಎಂಬುದು ತಿಳಿಯಲಿದೆ.