ಪುಟ್ಟೇನಹಳ್ಳಿಯಲ್ಲಿ ಜೋಡಿ ಕೊಲೆ ಲಕ್ಷಾಂತರ ಮೌಲ್ಯದ ವಸ್ತುಗಳ ಲೂಟಿ

ಬೆಂಗಳೂರು,ಏ.೮-ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ಮಹಿಳೆ ಸೇರಿ ಇಬ್ಬರನ್ನು ಜೋಡಿ ಕೊಲೆಗೈದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ಪುಟ್ಟೇನಹಳ್ಳಿಯ ಸಂತೃಪ್ತಿ ನಗರದಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಸಂತೃಪ್ತಿ ನಗರದ ಮಮತಾ ಬಸು (೭೫), ಈಕೆಯ ಪುತ್ರನ ಸ್ನೇಹಿತ ದೇವಬ್ರತಾ (೪೧) ಕೊಲೆಯಾದವರು. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ಅಧಿಕಾರಿಗಳು ಕೂಡಾ ಪರಿಶೀಲನೆ ನಡೆಸಿದ್ದಾರೆ.
ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಪಶ್ಚಿಮ ಬಂಗಾಳ ಮೂಲದ ಮಮತಾ ಬಸು ಸಂತೃಪ್ತಿ ನಗರದಲ್ಲಿ ಸ್ವಂತ ಮನೆ ಹೊಂದಿದ್ದರು.
ಅವರ ಪುತ್ರ ಸಹ ಪಕ್ಕದ ಬೀದಿಯಲ್ಲಿ ಪ್ರತ್ಯೇಕ ಮನೆಯೊಂದರಲ್ಲಿ ವಾಸವಾಗಿದ್ದನು.
ಈ ನಡುವೆ ಮಮತಾ ಪುತ್ರನ ಸ್ನೇಹಿತನಾಗಿದ್ದ ಒಡಿಶಾ ಮೂಲದ ದೇವಬ್ರತಾ ಎಂಬುವರಿಗೆ ನಗರದಲ್ಲಿ ಉಪನ್ಯಾಸಕನ ಕೆಲಸ ದೊರಕಿತ್ತು.
ಅದರಿಂದಾಗಿ ೨೦ ದಿನಗಳ ಹಿಂದೆ ನಗರಕ್ಕೆ ಬಂದು ಸ್ನೇಹಿತನ ಸಲಹೆಯಂತೆ ತಾಯಿ ಮನೆಯಲ್ಲಿ ಉಳಿದುಕೊಂಡಿದ್ದ.
ಆದರೆ ರಾತ್ರಿ ೧೨.೩೦ರ ವೇಳೆ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿದ್ದಾನೆ.
ಈ ವೇಳೆ ಚಾಕುವಿನಿಂದ ಮನೆಯಲ್ಲಿದ್ದ ಇಬ್ಬರನ್ನು ಕೊಲೆ ಮಾಡಿದ್ದಾನೆ. ಬಳಿಕ ಅಲ್ಲಿದ್ದ ಲ್ಯಾಪ್‌ಟಾಪ್, ಮೊಬೈಲ್, ಚಿನ್ನಾಭರಣ, ಎಟಿಎಂ ಕಾರ್ಡ್‌ಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ ಕೃತ್ಯಕ್ಕೆ ಮುನ್ನ ಮನೆಯ ಮುಂಭಾಗ ಸಿಸಿ ಟಿವಿ ಕ್ಯಾಮಾರ ಹೊಡೆದು ಹಾಕಲಾಗಿದೆ.
ಪುಟ್ಟೇನಹಳ್ಳಿ ಪೊಲೀಸರು ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಂಬಂಧ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ತಂಡ ರಚನೆ:
ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಕೊಲೆಗೈದು ಪರಾರಿಯಾಗಿರುವ ದುಷ್ಕರ್ಮಿಯ ಪತ್ತೆಗೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಹರೀಶ್ ಪಾಂಡೆ ತಿಳಿಸಿದ್ದಾರೆ.