ಪುಟ್ಟರಾಜ ಗವಾಯಿಗಳ ಹುಟ್ಟು ಹಬ್ಬ : ನ.೧೩ ವಚನ ಸಂಗೀತ ಸ್ಪರ್ಧೆ

ರಾಯಚೂರು.ನ.೦೮- ಪದ್ಮಭೂಷಣ ಡಾ.ಪಂ.ಪುಟ್ಟರಾಜ ಗವಾಯಿಗಳ ಹುಟ್ಟು ಹಬ್ಬ ಅಂಗವಾಗಿ ರಾಜ್ಯ ಮಟ್ಟದ ವಚನ ಗಾಯನ ವಿಭಾಗೀಯ ಮಟ್ಟದ ಸ್ಪರ್ಧೆಯನ್ನು ನ.೧೩ ರಂದು ನಗರದ ಬಸವ ಕೇಂದ್ರ ಬಸವೇಶ್ವರ ಕಾಲೋನಿಯಲ್ಲಿ ನಡೆಸಲಾಗುತ್ತದೆಂದು ಕಾರ್ಯಕ್ರಮ ಆಯೋಜಕರು ತಿಳಿಸಿದರು.
ಕಾರ್ಯಕ್ರಮ ಆಯೋಜಕರಾದ ಸೂಗೂರೇಶ ಅಸ್ಕಿಹಾಳ ಹಾಗೂ ವೆಂಕಟೇಶ ಆಲ್ಕೋಡ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವಚನ ಸ್ವರ ಸಂಯೋಜನೆಯಲ್ಲಿ ಪ್ರಥಮಿಗರು ಹಾಗೂ ನಾಡಿಗೆ ವಚನ ಸಂಗೀತದ ಮೂಲಕ ವಚನ ಗಾಯನ ಪರಂಪರೆಗೆ ನಾಂದಿಯಾಡಿದ ಪಂಡಿತರು ಮತ್ತು ೭೨೯ ಸ್ವರಚಿತ ವಚನಗಳ ಮೂಲಕ ತಮ್ಮದೇಯಾದ ಕೊಡುಗೆ ನೀಡಿದ ಡಾ.ಪಂ.ಪುಟ್ಟರಾಜ ಗವಾಯಿಗಳ ಹುಟ್ಟು ಹಬ್ಬ ಅಂಗವಾಗಿ ಈ ಕಾರ್ಯಕ್ರಮ ನಡೆಸಲಾಗುತ್ತದೆಂದು ಹೇಳಿದರು.
ವೆಂಕಟೇಶ ಆಲ್ಕೋಡ್ ಅವರು ಮಾತನಾಡುತ್ತಾ, ಗುಲ್ಬರ್ಗಾ ವಿಭಾಗೀಯ ಮಟ್ಟದ ಈ ಕಾರ್ಯಕ್ರಮ ನಗರದಲ್ಲಿ ನಡೆಸಲಾಗುತ್ತದೆ. ವಿಭಾಗ ಮಟ್ಟದ ನಂತರ ರಾಜ್ಯ ಮಟ್ಟದ ಎರಡನೇ ಸುತ್ತಿನ ಸ್ಪರ್ಧೆಯನ್ನು ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆಸಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಆಯ್ಕೆಯಾದ ಮೂವರು ಸ್ಪರ್ಧಾಳುಗಳನ್ನು ಮೈಸೂರಿನಲ್ಲಿ ನಡೆಯುವ ಗುರುವಚನ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಹಾಡುವುದಕ್ಕೆ ಅವಕಾಶ ನೀಡಲಾಗುತ್ತದೆ. ರಾಜ್ಯ ಮಟ್ಟದ ಪ್ರಥಮ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ೧೦ ಸಾವಿರ ಮತ್ತು ವಚನ ಗಾಯನ ಶ್ರೀ ಪುರಸ್ಕಾರ ನೀಡಲಾಗುತ್ತದೆ. ದ್ವಿತೀಯ ಸ್ಥಾನ ಪಡೆದವರಿಗೆ ೭ ಸಾವಿರ, ತೃತೀಯ ಸ್ಥಾನ ಪಡೆದವರಿಗೆ ೫ ಸಾವಿರ ಬಹುಮಾನ ನೀಡಲಾಗುತ್ತದೆ. ತಲಾ ಒಬ್ಬರಿಗೆ ಸಮಾಧಾನಕಾರ ಸಾವಿರ ರೂ. ನೀಡಿ, ಗೌರವಿಸಲಾಗುತ್ತದೆ. ಪ್ರಥಮ ಬಂದವರಿಗೆ ಮೈಸೂರಿನಲ್ಲಿ ನಡೆಯುವ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನೀಡಲಾಗುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ಪುಟ್ಟರಾಜ ಗವಾಯಿಗಳ ರಚನೆಯ ಹಾಡನ್ನೇ ಹಾಡಬೇಕು. ೧೫ ರಿಂದ ೨೦ ವಯೋಮಿತಿ ಇರಬೇಕು. ೧೦ ನಿಮಿಷದಲ್ಲಿ ೫ ವಚನಗಳನ್ನು ಪೂರ್ಣಗೊಳಿಸಬೇಕು. ಹೀಗೆ ನೋಂದಣಿ ಶುಲ್ಕ ೨೦೦ ರೂ. ಪಾವತಿಸಬೇಕು. ಕಲ್ಬುರ್ಗಿ, ಬಳ್ಳಾರಿ, ಬೀದರ, ಕೊಪ್ಪಳ, ಯಾದಗಿರಿ, ರಾಯಚೂರು, ವಿಜಯನಗರಗಳಿಂದ ಬರುವ ಕಲಾವಿದರು ಸಂಗೀತ ವಾದ್ಯಗಳನ್ನು ತಮ್ಮೊಂದಿಗೆ ತರುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಿದರು.