ಪುಟ್ಟಬಾಲಕಿ ಅಗಮ್ಯಶೆಟ್ಟಿ ಐಬಿಆರ್ ದಾಖಲೆ

ಕಲಬುರಗಿ ನ 30: ಯಾದಗಿರಿ ಜಿಲ್ಲೆ ಶಹಾಪುರ ಪಟ್ಟಣದ ಒಂದೂವರೆ ವರ್ಷದ ಪುಟ್ಟ ಹೆಣ್ಣುಮಗು ತನ್ನ ವಿಶೇಷ ಬುದ್ಧಿ ಮತ್ತು ನೆನಪಿನ ಶಕ್ತಿಯಿಂದ ಭಾರತದ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ ( ಐಬಿಆರ್)ಗೆ ಸೇರ್ಪಡೆಯಾಗಿದ್ದಾಳೆ.
ಇಲ್ಲಿನ ಹೊಟೇಲ್ ಉದ್ಯಮಿ ಗುರುದತ್ತ ಶೆಟ್ಟಿ ಹಾಗೂ ಮಮತಾ ಶೆಟ್ಟಿಯವರ ಪುತ್ರಿ ಅಗಮ್ಯ ಶೆಟ್ಟಿ ಈ ಸಾಧನೆ ಮಾಡಿದ ಪುಟಾಣಿ.
ಮೂಲತಃ ಉಡುಪಿ ಜಿಲ್ಲೆಯ ಉಪ್ಪುಂದ ಗ್ರಾಮದವರಾದ ಗುರುದತ್ತ ಶೆಟ್ಟಿ ಅವರು ಹಲವು ವರ್ಷಗಳಿಂದ ಶಹಾಪುರದಲ್ಲಿ ನೆಲಸಿದ್ದು ಇಲ್ಲಿ ವೈಷ್ಣವಿ ಸಸ್ಯಾಹಾರಿ ಹೋಟೆಲ್ ನಡೆಸುತ್ತಿದ್ದಾರೆ.
ಈ ಸೃಜನಶೀಲ ಮಗು ಅಗಮ್ಯ ( 1.6 ವರ್ಷ) ಮಹಾಭಾರತದ ಪಂಚಪಾಂಡವರ ಪಾತ್ರಗಳನ್ನು ಭಾವನಾತ್ಮಕವಾಗಿ ಅಭಿನಯಿಸಿ ತೋರಿಸುತ್ತಾಳೆ.
ಏಳು ವಿವಿಧ ಬಗೆಯ ಪ್ರಾಣಿಗಳ ಧ್ವನಿಯನ್ನು ಅನುಕರಿಸುತ್ತಾಳೆ. ವಿವಿಧ ಬಗೆಯ ಧಾನ್ಯಗಳನ್ನು ಗುರುತಿಸುತ್ತಾಳೆ. ಹದಿನಾಲ್ಕು ಪ್ರಾಣಿಗಳನ್ನು ಗುರುತಿಸುತ್ತಾಳೆ. ದೇಹದ ಅವಯವಗಳು,ಇಪ್ಪತ್ತಕ್ಕೂ ಹೆಚ್ಚು ಗೃಹಬಳಕೆ ವಸ್ತುಗಳನ್ನು ತಪ್ಪಿಲ್ಲದಂತೆ ಗುರುತಿಸುತ್ತಾಳೆ. ಇಂತಹ ತನ್ನ ವಿಶೇಷ ಬುದ್ಧಿ ಹಾಗೂ ನೆನಪಿನ ಶಕ್ತಿಯಿಂದ ಭಾರತದ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ ಆಗುವುದರ ಮೂಲಕ ತನ್ನ ಊರಿಗೆ,ಹಾಗೂ ಕುಟುಂಬಕ್ಕೆ ಕೀರ್ತಿ ತಂದಿದ್ದಾಳೆ.