ಪುಟಿನ್ ವಿರುದ್ಧ ಬಂಧನ ವಾರೆಂಟ್

ಹೇಗ್, ಮಾ.೧೮- ಉಕ್ರೇನ್‌ನಲ್ಲಿ ಯುದ್ಧಾಪರಾಧ ಎಸಗಿದ ಆರೋಪದಲ್ಲಿ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿದೆ. ಅತ್ತ ರಷ್ಯಾ ಐಸಿಸಿಯ ಈ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದು, ಇದೊಂದು ಅತಿರೇಕತನ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದೆ.
ಉಕ್ರೇನ್‌ನಿಂದ ರಷ್ಯಾಗೆ ಮಕ್ಕಳನ್ನು ಕಾನೂನು ಬಾಹಿರವಾಗಿ ಗಡೀಪಾರು ಮಾಡಿದ ಮತ್ತು ಜನರನ್ನು ಕಾನೂನುಬಾಹಿರವಾಗಿ ವರ್ಗಾಯಿಸಿದ ಆರೋಪದಲ್ಲಿ ಈ ವಾರಂಟ್ ಜಾರಿಯಾಗಿದೆ. ಉಕ್ರೇನ್‌ನಲ್ಲಿ ಯುದ್ಧಾಪರಾಧ ಎಸಗಲಾಗಿದೆ ಎಂಬ ಆರೋಪದ ವಿಚಾರಣೆ ನಡೆಸುತ್ತಿರುವ ಐಸಿಸಿ, ಇದೇ ಆರೋಪದಲ್ಲಿ ರಷ್ಯಾದ ಮಕ್ಕಳ ಹಕ್ಕುಗಳ ಆಯೋಗದ ಕಮಿಷನರ್ ಮರಿಯಾ ಲ್ವೊವಾ ಬೆಲೊವಾ ವಿರುದ್ಧವೂ ವಾರೆಂಟ್ ಜಾರಿಗೊಳಿಸಿದೆ. ಆದರೆ ರಷ್ಯಾವು ಐಸಿಸಿಯ ಸದಸ್ಯನಲ್ಲದ ಕಾರಣ ಈ ವಾರಂಟ್ ಅನ್ನು ಯಾವ ರೀತಿ ಜಾರಿಗೊಳಿಸಲಾಗುವುದು ಎಂಬುದು ಸ್ಪಷ್ಟವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ೨೦೨೨ರ ಫೆಬ್ರವರಿ ೨೪ರಿಂದ ಉಕ್ರೇನ್ ವಿರುದ್ಧ ಯುದ್ದ ಆರಂಭಿಸಿದಂದಿನಿಂದ ಅಪರಾಧ ಕೃತ್ಯಗಳನ್ನು ಎಸಗಲಾಗಿದೆ ಎಂದು ಐಸಿಸಿ ತಿಳಿಸಿದೆ. ಆದರೆ ರಷ್ಯಾ ಸದಸ್ಯ ರಾಷ್ಟ್ರವಲ್ಲದ ಹಿನ್ನಲೆಯಲ್ಲಿ ಪುಟಿನ್‌ರನ್ನು ಬಂಧಿಸಲು ಐಸಿಸಿಗೆ ಯಾವುದೇ ಅಧಿಕಾರವಿಲ್ಲ. ಆದರೆ ಅಂತಾರಾಷ್ಟ್ರೀಯವಾಗಿ ಪ್ರಯಾಣಿಸುವ ವಿಚಾರದಲ್ಲಿ ಪುಟಿನ್‌ಗೆ ಸಮಸ್ಯೆ ಉಂಟಾಗಬಹುದು ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಸಿಸಿ, ಪುಟಿನ್ ನೇರವಾಗಿ ಅಪರಾಧ ಕೃತ್ಯಗಳನ್ನು ಮಾಡಿದ್ದಾರೆ ಮತ್ತು ಇತರರೊಂದಿಗೆ ಕೆಲಸ ಮಾಡಿದ್ದಾರೆ ಎಂದು ನಂಬಲು ಸಮಂಜಸವಾದ ಆಧಾರಗಳಿವೆ. ಮಕ್ಕಳನ್ನು ಗಡೀಪಾರು ಮಾಡುವುದನ್ನು ತಡೆಯಲು ತನ್ನ ಅಧ್ಯಕ್ಷೀಯ ಅಧಿಕಾರವನ್ನು ಬಳಸಲು ಪುಟಿನ್ ವಿಫಲವಾಗಿದ್ದಾರೆ. ಬಂಧನ ವಾರೆಂಟ್ ಅನ್ನು ರಹಸ್ಯವಾಗಿಡಲು ಆರಂಭದಲ್ಲಿ ನಾವು ಯೋಚಿಸಿದ್ದೆವು. ಆದರೆ ಅಪರಾಧಗಳನ್ನು ಮಾಡುವುದನ್ನು ನಿಲ್ಲಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕಗೊಳಿಸಲಾಗಿದೆ ಎಂದು ತಿಳಿಸಿದೆ. ಅತ್ತ ಐಸಿಸಿಯ ಈ ಆರೋಪವನ್ನು ರಷ್ಯಾ ಉಗ್ರವಾಗಿ ಖಂಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಕ್ತಾರ ದಿಮಿತ್ರಿ ಪೊಸ್ಕೊವ್, ಈ ಕಾಗದ (ವಾರಂಟ್)ವನ್ನು ಎಲ್ಲಿ ಬಳಸಬೇಕು ಎಂಬುದನ್ನು ವಿವರಿಸುವ ಅಗತ್ಯವಿಲ್ಲ ಎಂದು ಅವರು ಟಾಯ್ಲೆಟ್ ಪೇಪರ್ ಎಮೋಜಿಯೊಂದಿಗೆ ಟ್ವಿಟರ್‌ನಲ್ಲಿ ಬರೆದಿದ್ದಾರೆ.