ರಷ್ಯಾ, ಜು.೧೫- ವ್ಯಾಗ್ನರ್ ಕೂಲಿ ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಇದೀಗ ರಷ್ಯಾದ ಸೈನ್ಯದಲ್ಲಿ ಒಂದು ಘಟಕವಾಗಿ ಸೇವೆ ಸಲ್ಲಿಸುವ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತಿಳಿಸಿದ್ದಾರೆ.
ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪುಟಿನ್, ರಷ್ಯಾದ ಸೈನ್ಯದಲ್ಲಿ ಒಂದು ಘಟಕವಾಗಿ ಸೇವೆ ಸಲ್ಲಿಸುವ ಪ್ರಸ್ತಾಪವನ್ನು ವ್ಯಾಗ್ನರ್ ಗುಂಪಿನ ಅನೇಕ ಕಮಾಂಡರ್‌ಗಳು ಒಪ್ಪಿದ್ದಾರೆ. ಆದರೆ ಪ್ರಿಗೊಜಿನ್ ಮಾತ್ರ ಇದಕ್ಕೆ ಒಪ್ಪಿಗೆ ನೀಡಿಲ್ಲ. ಜೂನ್ ೨೯ರಂದು ನಡೆದ ಸಭೆಯಲ್ಲಿ ವ್ಯಾಗ್ನರ್ ಮುಖ್ಯಸ್ಥ ಪ್ರಿಗೊಜಿನ್ ಸೇರಿದಂತೆ ಇತರೆ ೩೫ ಕಮಾಂಡರ್‌ಗಳು ಭಾಗಿಯಾಗಿದ್ದರು. ಅಲ್ಲದೆ ಪ್ರಿಗೊಜಿನ್ ಅಡಿಯಲ್ಲೇ ಮಿಲಿಟರಿ ಸೇವೆ ಮಾಡುವ ನಿಟ್ಟಿನಲ್ಲಿ ನಾವು ಅವರಿಗೆ ಅವಕಾಶ ನೀಡಿದ್ದೇವೆ. ಇದಕ್ಕೆ ಹೆಚ್ಚಿನವರು ಬೆಂಬಲ ನೀಡಿದ್ದಾರೆ. ಆದರೆ ಪ್ರಿಗೊಜಿನ್ ಮಾತ್ರ ಇದಕ್ಕೆ ಸಹಮತಿ ವ್ಯಕ್ತಪಡಿಸಿಲ್ಲ. ವ್ಯಾಗ್ನರ್ ಹೋರಾಟಗಾರರನ್ನು ಕಾನೂನುಬದ್ಧಗೊಳಿಸುವುದು ಹೇಗೆ ಎಂಬ ಕಷ್ಟಕರ ವಿಷಯದ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆಸಬೇಕಿದೆ ಎಂದು ಪುಟಿನ್ ತಿಳಿಸಿದ್ದಾರೆ. ಇನ್ನು ರಷ್ಯಾದಲ್ಲಿ ಸೇನಾ ದಂಗೆಗೆ ಯತ್ನಿಸಿದ್ದ ಪ್ರಿಯೊಜಿನ್ ಬಳಿಕ ನಡೆದ ಅನಿರೀಕ್ಷಿತ ಘಟನೆಯಲ್ಲಿ ಹಿಂದಕ್ಕೆ ಸರಿದಿದ್ದರು. ಬೆಲರೂಸ್ ಅಧ್ಯಕ್ಷ ಲುಕಾಷೆಂಕೊ ಅವರ ಮಧ್ಯಪ್ರವೇಶದಿಂದ ಎಲ್ಲವೂ ಸರಿದಾರಿಗೆ ಬಂದಿತ್ತು. ಆದರೆ ಈಗಲೂ ರಷ್ಯಾದ ಮಿಲಿಟರಿ ಅಡಿಯಲ್ಲಿ ಕರ್ತವ್ಯ ನಿರ್ವಹಿಸಲು ಪ್ರಿಗೊಜಿನ್ ನಿರಾಕರಿಸಿದ್ದಾರೆ. ಸದ್ಯ ವ್ಯಾಗ್ನರ್ ಮುಖ್ಯಸ್ಥ ಹಾಗೂ ವ್ಯಾಗ್ನರ್ ಸಾಮಾನ್ಯ ವ್ಯಾಗ್ನರ್ ಹೋರಾಟಗಾರರನ್ನು ಪ್ರತ್ಯೇಕಿಸಲು ಬಯಸುತ್ತಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ವ್ಯಾಗ್ನರ್ ಪಡೆಯ ಹೆಚ್ಚಿನ ಕಮಾಂಡರ್‌ಗಳು ಪುಟಿನ್ ಪ್ರಸ್ತಾವವನ್ನು ಸ್ವೀಕರಿಸಿದ್ದರೆ ಪ್ರಿಗೊಜಿನ್ ಮಾತ್ರ ನಿರಾಕರಿಸಿದ್ದಾರೆ.