ಪುಟಾಣಿಗಳ ರಂಜಿಸುವ ಮಕ್ಕಳ ದಸರೆಗೆ ಚಾಲನೆ

ಸಂಜೆವಾಣಿ ನ್ಯೂಸ್
ಮೈಸೂರು, ಅ.19:-ಮಹನೀಯರ ವೇಷಭೂಷಣ ತೊಟ್ಟು ಪುಟಾಣಿಗಳು ಗಾಂಭೀರ್ಯದಿಂದ ವೇದಿಕೆ ಮೇಲೆ ಹೆಜ್ಜೆ ಹಾಕಿದರು. ಜನಪದ ನೃತ್ಯ, ಗಾಯನ …ಹೀಗೆ ನಾನಾ ಕಲಾ ಪ್ರತಿಭೆಯನ್ನು ವೇದಿಕೆ ಮೇಲೆ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು.
ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ವತಿಯಿಂದ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ಮಕ್ಕಳ ದಸರಾಕ್ಕೆ ಬುಧವಾರ ಅದ್ಧೂರಿ ಚಾಲನೆ ದೊರೆಯಿತು.
ಹೂಟಗಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸುಗಮ ಸಂಗೀತ ಕಾರ್ಯಕ್ರಮ ನಡೆಸಿದರು. 6 ರಿಂದ 7ನೇ ತರಗತಿ ಮತ್ತು 8-10ನೇ ತರಗತಿ ವಿಭಾಗದ ವಿಶೇಷ ಅಗತ್ಯತೆವುಗಳ್ಳ ಮಕ್ಕಳು ವೇಷಭೂಷಣ ಸ್ಪರ್ಧೆ ನಡೆಯಿತು. ಚಿಣ್ಣರು ವಿವೇಕಾನಂದ, ಚಾಮುಂಡಿ, ಕೋಲಾ ಮುಂತಾದ ವೇಷದಲ್ಲಿಕಂಗೊಳಿಸಿ ಮಕ್ಕಳ ದಸರೆಗೆ ಮೆರುಗು ತಂದರು.
ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ 9 ವಿಭಾಗಗಳ ಮಕ್ಕಳು ರಚಿಸಿದ ಪ್ರಾತ್ಯಕ್ಷಿಕೆಗಳ ವಸ್ತು ಪ್ರದರ್ಶನವೂ ವಿಶೇಷವಾಗಿತ್ತು. ಕರುನಾಡಿನ ಭೂಪಟದ ಮಾದರಿಯ ಮಧ್ಯದಲ್ಲಿ ನಿಂತು ಶಿಕ್ಷಕರು, ಮಕ್ಕಳ ದಸರಾ ನೋಡಲು ಬಂದವರು ಸೆಲ್ಪಿ ಕ್ಲಿಕ್ಕಿಸಿಕೊಂಡರು.
ಈ ಬಾರಿ ಯಶಸ್ವಿಯಾದ ಚಂದ್ರಯಾನದ ಮಾಹಿತಿಯನ್ನು ಮಕ್ಕಳು ಕುತೂಹಲದಿಂದಲೇ ಪಡೆದುಕೊಂಡು ಸಂಭ್ರಮಿಸಿದರು. ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಶಾಲಾ ಮಕ್ಕಳಿಗೆ ಮೊಟ್ಟೆ ಸಹಿತ ಪೌಷ್ಠಿಕಾಂಶದ ಮಾಹಿತಿಯನ್ನು ನೀಡಲಾಯಿತು.
ನಾಡಿನ ಪರಂಪರೆ ಸಾರುವ ಕಲಾಕೃತಿಗಳು ಬುಡಕಟ್ಟು ಸಂಸ್ಕೃತಿ ಮತ್ತು ಅರಣ್ಯ ಉತ್ಪನ್ನಗಳು, ಪರಿಸರ ಸಂರಕ್ಷಣೆ, ಮೈಸೂರಿನ ಪ್ರೇಕ್ಷಣೀಯ ಸ್ಥಳಗಳು, ಕನ್ನಡ ನಾಡು, ನುಡಿ ಮತ್ತು ಭಾಷೆ, ಶಿಕ್ಷಣ ಇಲಾಖೆಯ ಪೆÇ್ರೀತ್ಸಾದಾಯಕ ಯೋಜನೆಗಳು, ಶಿಕ್ಷಣದಲ್ಲಿ ರಂಗಕಲೆ, ಮೈಸೂರು ದಸರಾ ಪರಂಪರೆಯ ಮಕ್ಕಳು ತಯಾರಿಸಿದ ಪ್ರತಿಕೃತಿಗಳೊಂದಿಗೆ ವಿದ್ಯಾರ್ಥಿಗಳು ಮಾಹಿತಿ ನೀಡುತ್ತಿದ್ದರು.
ದಿಯಾ ಹೆಗಡೆ, ಪ್ರಗತಿ ಬಡಿಗೇರ್ ಗಾಯನದ ಮೋಡಿ: ಎರಡು ದಿನಗಳ ವೈಭವದ ಮಕ್ಕಳ ದಸರೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು. ವಸ್ತು ಪ್ರದರ್ಶನದ ಎಲ್ಲ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ದೀಪ ಬೆಳಗುವ ಮೂಲಕ ಮಕ್ಕಳ ದಸರೆಗೆ ಚಾಲನೆ ನೀಡಿದರು.
ಇದೆ ಸಂದರ್ಭದಲ್ಲಿ ಸರಿಗಮಪ ಸೀಸನ್ 19ರ ಖ್ಯಾತಿಯ ದಿಯಾ ಹೆಗಡೆ ಮತ್ತು ಸೀಸನ್ ವಿಜೇತೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಪ್ರಗತಿ ಬಡಿಗೇರ್ ಗಾಯನದ ಮೋಡಿ ಕಾರ್ಯಕ್ರಮಕ್ಕೆ ಉತ್ಸವ ತಂದಿತು.
ದಿಯಾ ಹೆಗಡೆ ತಾನೇ ರಚಿಸಿದ ದಸರಾ ವೈಭವು ಇಂದು, ಚಾಮುಂಡಿ ರಕ್ಷಣೆಯು ಇಂದು, ನಾಡ ಸಂಸ್ಕೃತಿ ಸಾರುವ ಹಬ್ಬ, ನಮ್ಮ ದಸರಾ… ದಸರಾ… ಸಾಹಿತ್ಯವನ್ನು ವರನಟ ರಾಜ್ ಕುಮಾರ್ ಅಭಿನಯಾದ ಗಂಧದ ಗುಡಿ ಬಾಳ ಬಂಗಾರ ನೀನು ಹಣೆಯ ಸಿಂಗರ ನೀನು ಹಾಡಿಗೆ ಪ್ರೇಕ್ಷಕರು ಮನಸೋತರು. ಇದಕ್ಕೂ ಮುನ್ನ ದಸರಾ ಪರಂಪರೆಯ ಕುರಿತು ಕವನ ವಾಚಿಸಿದರು.
ಇನ್ನೂ ಪ್ರಗತಿ ಬಡಿಗೇರ್ ಕನಸಲ್ಲಿ ಕಂಡವನ್ಯಾರೇ, ಮನಸ್ಸಿ ನಿಂತವನ್ಯಾರೇ…ಹಾಡನ್ನು ಹಾಡಿ ನೆರೆದಿದ್ದವರ ಮನಕ್ಕೆ ಭಕ್ತಿ ಲಹರಿಯನ್ನು ತುಂಬಿದರು. ತಿಲಕ್ ನಗರದ ಅಂದ ಸರ್ಕಾರಿ ಪಾಠಶಾಲೆಯ ರಾಜ್ಯ ಮಟ್ಟದ ಸೋಲೋ ಡ್ಯಾನ್ಸ್ ವಿಜೇತ ಜಿ.ಎಂ.ಗಂಗಾಧರ್ ನೃತ್ಯ ಪ್ರದರ್ಶಿಸಿದರು. ತಿ.ನರಸೀಪುರ ತಾಲ್ಲೂಕಿನ ಕುರುಬೂರು ಪ್ರೌಢಶಾಲೆಯ ಶ್ರೀ ನಿರ್ವಾಣಸ್ವಾಮಿ ಗ್ರಾಮೀಣ ಪ್ರೌಢಶಾಲೆಯ ಖೋ-ಖೋ ರಾಷ್ಟ್ರೀಯ ಕ್ರೀಡಾಪಟು ಮಾಸನ ಅವರನ್ನು ಅಭಿನಂದಿಸಲಾಯಿತು. ಕಲಾವಿದೆ ಇಂದು ಶ್ರೀ ಅವರು ಮಾತನಾಡುವ ಗೊಂಬೆ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಹರೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಮಹಾಪೌರ ಶಿವಕುಮಾರ್, ಉಪ ಮಹಾಪೌರರಾದ ಡಾ.ಜಿ.ರೂಪ, ನಗರಪಾಲಿಕೆ ಸದಸ್ಯರಾದ ಬಿ.ಪ್ರಮೀಳಾ ಭರತ್, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯ ಉಪ ವಿಶೇಷಾಕಾರಿ ರುಚಿ ಬಿಂದಲ್, ಮಕ್ಕಳ ದಸರಾ ಸಮಿತಿ ಅಧ್ಯಕ್ಷರಾದ ಸುಧಾ ಮಹದೇವ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಕೆ.ಪಾಂಡು, ಸಮಿತಿಯ ಸದಸ್ಯರಾದ ಉದಯ್ ಕುಮಾರ್ ಕಾರ್ಯಕ್ರಮದಲ್ಲಿ ಹಾಜರಿದ್ದರು.