ಪುಂಡರಿಗೆ ಪೊಲೀಸರ ಎಚ್ಚರಿಕೆ

ಮಧುಗಿರಿ, ಜು. ೨೯- ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ಪುಂಡರಿಗೆ ಪಿಎಸ್‌ಐ ಕೆ.ಟಿ. ರಮೇಶ್ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.
ಬಹಳ ದಿನಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದ ಗೋಡೆಯ ಮೇಲೆ ಹೆಣ್ಣು ಮಕ್ಕಳ ಹೆಸರು ಬರೆಯುವುದು ಹಾಗೂ ಪ್ರೀತಿಸು ಅಂತ ಹಿಂದೆ ಬಿದ್ದು ಚುಡಾಯಿಸುವುದನ್ನೇ ಕೆಲ ಕಿಡಿಗೇಡಿಗಳು ಅಭ್ಯಾಸ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ವಿಷಯ ತಿಳಿದು ಪಿಎಸ್‌ಐ ಕೆ.ಟಿ. ರಮೇಶ್ ಅವರು ಕಾಲೇಜು ಆವರಣಕ್ಕೆ ದಿಢೀರ್ ಭೇಟಿ ನೀಡಿದಾಗ, ಕಾಲೇಜಿನ ಆವರಣದಲ್ಲಿ ಅನಗತ್ಯವಾಗಿ ಓಡಾಡು ತ್ತಿದ್ದ ಪುಂಡರನ್ನು ಅಟ್ಟಾಡಿಸಿದರು. ಈ ಸಂದರ್ಭದಲ್ಲಿ ಕಾಲೇಜಿಗೆ ಬಂದಿದ್ದರೂ ಪಾಠ ಕೇಳದೇ ಅನಗತ್ಯವಾಗಿ ಸುತ್ತಾಡುತ್ತಿದ್ದ ವಿದ್ಯಾರ್ಥಿಗಳಿಗೂ ಕಿವಿ ಮಾತು ಹೇಳಿ ಕಾಲೇಜಿಗೆ ಕಳುಹಿಸಿದರು.
ಪುಂಡರು ನಿಮ್ಮನ್ನು ಚುಡಾಯಿಸಿದರೆ, ೧೧೨ ಕರೆ ಮಾಡುವಂತೆ ವಿದ್ಯಾರ್ಥಿನಿಯರಿಗೆ ತಿಳಿಸಿದರು.