ಪೀಳಿಗೆಯ ಪುನಃಸ್ಥಾಪನೆಗೆ ಪ್ರತಿಯೊಬ್ಬರೂ ಸಸಿ ನೆಡಿ: ವಿಮಲ್ ಸಿಂಗ್

ಮರಿಯಮ್ಮನಹಳ್ಳಿ, ಜೂ.06: ಭವಿಷ್ಯದ ಮನುಕುಲದ ಪೀಳಿಗೆಯ ಪುನಃಸ್ಥಾಪನೆಗಾಗಿ ಪ್ರತಿಯೊಬ್ಬರೂ ಗಿಡನೆಟ್ಟು ಪೋಷಣೆ ಮಾಡುವ ಶಪಥ ತೊಡಬೇಕಾಗಿದೆ ಎಂದು ಬಿಎಂಎಂ ಇಸ್ಪಾತ್ ಲಿ.ನ ಸಿ.ಇ.ಒ. ವಿಮಲ್ ಸಿಂಗ್ ಅಭಿಪ್ರಾಯ ಪಟ್ಟರು.
ಅವರು ಮರಿಯಮ್ಮನಹಳ್ಳಿಗೆ ಸಮೀಪದ ಡಣಾಪುರ ಬಳಿಯ ಬಿಎಂಎಂ ಇಸ್ಪಾತ್ ಲಿ. ನ ಆವರಣದಲ್ಲಿ ವಿಶ್ವ ಪರಿಸರದ ದಿನಾಚರಣೆಯ ಅಂಗವಾಗಿ ನಡೆದ ಪೀಳಿಗೆಯ ಪುನಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಂಪನಿಯವತಿಯಿಂದ ಇಂದು ಐದು ಸಾವಿರ ಗಿಡಗಳನ್ನು ನೆಡಲಾಗುತ್ತಿದೆ. ಅಲ್ಲದೇ ಕಾರ್ಖಾನೆ ವ್ಯಾಪ್ತಿಯ ಹಳ್ಳಿಗಳಲ್ಲಿ, ಶಾಲೆಗಳ ಆವರಣಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಿಡನೆಡುವ ಕಾರ್ಯಕ್ರಮ ತಿಂಗಳು ಪೂರ್ಣ ನಡೆಯಲಿದೆ ಎಂದರು.
ಕಂಪನಿಯ ಖಾಯಂ ನೌಕರರಾಗಲಿ, ಗುತ್ತಿಗೆ ನೌಕರರಾಗಲಿ ಅಥವಾ ಯಾರೇ ಸಾರ್ವಜನಿಕರಾಗಲಿ ತಮ್ಮ ಹಾಗೂ ತಮ್ಮ ಕುಟುಂಬದವರ ಜನ್ಮದಿನಾಚರಣೆ, ಮದುವೆ ವಾರ್ಷಿಕೋತ್ಸವ ಅಥವಾ ಯಾವುದೇ ವಿಶೇಷ ದಿನಾಚರಣೆಗಳನ್ನು ಒಂದೊಂದು ಸಸಿ ನೆಡುವ ಮೂಲಕ ಆಚರಿಸಿಕೊಳ್ಳಿ ಎಂದು ಸಲಹೆ ಮಾಡಿದರು. ಈ ರೀತಿ ಆಚರಿಸಲು ಇಚ್ಛಿಸುವವರಿಗೆ ನಮ್ಮ ಕಾರ್ಖಾನೆಯ ಆವರಣದಲ್ಲಿ ಅವರ ಹೆಸರಿನಲ್ಲಿ ಸಸಿ ನೆಡಲು ಅವಕಾಶ ನೀಡಲಾಗುವುದು. ಇಲ್ಲವೇ ಅವರ ಮನೆ ಅಥವಾ ಶಾಲಾ ದೇವಸ್ಥಾನ ಆವರಣದಲ್ಲಿ ಸಸಿ ನೆಡಲು ಇಚ್ಛಿಸಿದರೆ ಅವರಿಗೆ ಗಿಡಗಳನ್ನು ಒದಗಿಸಲು ಕಂಪನಿ ಬದ್ಧವಾಗಿದೆ ಎಂದರು.
ಬಿ.ಎಂ.ಎಂ. ಕಂಪನಿಯ ಇ.ಡಿ.ಅಂಡ್ ಸಿ.ಎಫ್.ಒ. ವಿ.ವಿ.ವಿ.ರಾಜು, ಡಿ.ಜಿ.ಎಂ. ಗಣೇಶ್ ಹೆಗಡೆ, ಪರಿಸರ ಮಹತ್ವ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಕಂಪನಿಯ ವಿವಿಧ ವಿಭಾಗದ ಮುಖ್ಯಸ್ಥರಾದ ಮನೋಜ್ ಕೆ. ಅಗರ್‍ವಾಲ್, ಎಸ್.ಆರ್. ಪುಟಪ್ಪ, ರಾಜೇಂದ್ರ ಮನೋಹರ, ವೈದ್ಯ ಡಾ.ಪಿ.ವಿಜಯ್ ವೆಂಕಟೇಶ್ ಹಾಗೂ ಇತರರು ಇದ್ದರು. ಕಾರ್ಯಕ್ರಮವನ್ನು ಕಂಪನಿಯ ಡಾ.ಶಿವನಗೌಡ ನಿರ್ವಹಿಸಿದರು.